ಮೈಸೂರು,ಮಾರ್ಚ್,12,2025 (www.justkannada.in): ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಬಳಿಕ ನೆನೆಗುದಿಗೆ ಬಿದ್ದಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸುತ್ತಿರುವ ಡೆವಿಲ್ ಚಿತ್ರದ ಚಿತ್ರೀಕರಣ ಇಂದಿನಿಂದ ಮೈಸೂರಿನಲ್ಲಿ ಪುನಾರಂಭಗೊಂಡಿದ್ದು ಶೂಟಿಂಗ್ ಗೂ ಮುನ್ನ ನಟ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ.
ಮಾರ್ಚ್ 12ರಿಂದ ಮಾರ್ಚ್ 15ರವರೆಗೆ ಡೆವಿಲ್ ಚಿತ್ರದ ಚಿತ್ರೀಕರಣಕ್ಕೆ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಅವರು ಅನುಮತಿ ನೀಡಿದ್ದಾರೆ. ಹೀಗಾಗಿ ಇಂದಿನಿಂದ ಮಾರ್ಚ್ 14 ರವರೆಗೆ ಸರ್ಕಾರಿ ಅತಿಥಿ ಗೃಹದಲ್ಲಿ ಚಿತ್ರೀಕರಣ ನಡೆಯಲಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೂಟಿಂಗ್ ಮಾಡಲು ಚಿತ್ರತಂಡ ತೀರ್ಮಾನ ಮಾಡಿದೆ.
ನಂತರ ಮಾರ್ಚ್ 15ರಂದು ಲಲಿತಮಹಲ್ ನಲ್ಲಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ ಚಿತ್ರೀಕರಣ ಮಾಡಲು ಪ್ಲ್ಯಾನ್ ರೂಪಿಸಿದೆ. ಚಿತ್ರೀಕರಣಕ್ಕೆ ಅನುಮತಿ ಹಿನ್ನೆಲೆಯಲ್ಲಿ ಒಂದು ಪಾಳಿಯಲ್ಲಿ 10 ಮಂದಿ ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಒಟ್ಟು 32 ಸಿಬ್ಬಂದಿ ಶೂಟಿಂಗ್ ಭದ್ರತೆಗೆ ನಿಯೋಜನೆಗೊಂಡಿದ್ದು, ನಟನ ಭದ್ರತೆಗಾಗಿ ಸಿಬ್ಬಂದಿ ನಿಯೋಜಿಸಲು 1,64,785 ರೂ. ಹಣ ಪಾವತಿ ಮಾಡಲಾಗುತ್ತಿದೆ ಎನ್ನಲಾಗಿದೆ.
ತಾಯಿ ಚಾಮುಂಡೇಶ್ವರಿ ಮೊರೆ ಹೋದ ನಟ ದರ್ಶನ್
10 ತಿಂಗಳ ಬಳಿಕ ನಟ ದರ್ಶನ್ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಡೆವಿಲ್ ಶೂಟಿಂಗ್ ಗೂ ಮುನ್ನ ನಟ ದರ್ಶನ್ ದೇವರ ಮೊರೆ ಹೋಗಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದಿದ್ದಾರೆ. ಚಾಮುಂಡಿ ಬೆಟ್ಟದಿಂದ ನೇರವಾಗಿ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ್ದು ಶೂಟಿಂಗ್ ನಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಬಳಿಕ ಡೆವಿಲ್ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿತ್ತು. ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ನಟ ದರ್ಶನ್ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ನಂತರ ಮೈಸೂರಿನ ಲಲಿತಮಹಲ್ ಪ್ಯಾಲೇಸ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ವೇಳೆಯೇ ನಟ ದರ್ಶನ್ ಅರೆಸ್ಟ್ ಆಗಿದ್ದರು.
Key words: Actor Darshan, Devil, shooting, begins, Mysore