ಬೆಂಗಳೂರು ಮಾರ್ಚ್,12,2025 (www.justkannada.in): ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ರಚಿಸಿ ಅದಕ್ಕೆ ಕಾಂಗ್ರೆಸ್ ಕಾರ್ಯಕರ್ತರನ್ನ ನೇಮಿಸಿ ಸರ್ಕಾರ ಸಂಬಳ ನೀಡುತ್ತಿರುವುದಕ್ಕೆ ವಿಪಕ್ಷಗಳಿಂದ ಆಕ್ಷೇಪ, ವಿರೋಧ ವ್ಯಕ್ತವಾದ ಬೆನ್ನಲ್ಲೆ ಈ ಬಗ್ಗೆ ಇದೀಗ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆರೋಪದ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಧಿವೇಶನ ಮುಗಿಯುತ್ತಿದ್ದಂತೆ ಈ ಬಗ್ಗೆ ಸಭೆ ಕರೆದು ತಕರಾರುಗಳನ್ನು ಪರಿಹರಿಸಲಾಗುವುದು ಎಂದರು.
ಅಧಿಕಾರಕ್ಕೆ ಬಂದಾಗ ಪಕ್ಷದ ಕಾರ್ಯಕರ್ತರಿಗೆ ಅಧಿಕಾರದಲ್ಲಿ ಅವಕಾಶ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದಲ್ಲಿ ಎಲ್ಲಾ ಶಾಸಕರ ಕಚೇರಿಗೂ RSS ಕಾರ್ಯಕರ್ತರನ್ನು ನೇಮಿಸಿಕೊಳ್ಳುತ್ತಿರುವುದನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ, ತಾಲ್ಲೂಕುಗಳಲ್ಲಿ ಶಾಸಕರ ಘನತೆಗೆ, ಅಧಿಕಾರಕ್ಕೆ ಯಾವುದೇ ಚ್ಯುತಿ ಬರುವುದಿಲ್ಲ. ಈ ಬಗ್ಗೆ ಎಲ್ಲಾ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ ಎಂದರು.
ರಾಜ್ಯ ಮತ್ತು ಜಿಲ್ಲಾ, ತಾಲ್ಲೂಕು ಗ್ಯಾರಂಟಿ ಜಾರಿ ಸಮಿತಿಗಳಲ್ಲಿ ಬದಲಾವಣೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಸರ್ಕಾರಿ ಸಂಬಳ ಭತ್ಯೆ ನೀಡುತ್ತಿದೆ ಎಂದು ಬಿಜೆಪಿ-ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿ ಈ ಬಗ್ಗೆ ರಾಜ್ಯಪಾಲರಿಗೆ ಈಗಾಗಲೇ ದೂರು ನೀಡಿದೆ.
Key words: Guarantee committees, MLAs, dignity, CM Siddaramaiah