ಏ.20 ರಂದು ಮೈಸೂರಿನಲ್ಲಿ ವಿಶ್ವಕರ್ಮ ಸಮುದಾಯ ಬೃಹತ್ ಸಮಾವೇಶ

ಮೈಸೂರು,ಮಾರ್ಚ್,12,2025 (www.justkannada.in): ಏಪ್ರಿಲ್ 20 ರಂದು ಮೈಸೂರಿನಲ್ಲಿ ವಿಶ್ವಕರ್ಮ ಸಮುದಾಯ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಯುವ ಬ್ರಿಗೇಡ್ ಅಧ್ಯಕ್ಷ ನಾಗೇಂದ್ರ ತಿಳಿಸಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಸಮಾವೇಶ ನಡೆಸಲು ಚಿಂತನೆ ನಡೆಸಿದ್ದು ಈ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ ವಿಶ್ವ ಕರ್ಮ ಯುವ ಬ್ರಿಗೇಡ್ ವತಿಯಿಂದ ಸಮಾವೇಶ ಕುರಿತು ಇಂದು  ಮೈಸೂರಿನ ರೋಟರಿ ಭವನದಲ್ಲಿ ಕೆಪಿಸಿಸಿ ಒಬಿಸಿ ರಾಜ್ಯ ಕಾರ್ಯದರ್ಶಿ ವಸಂತ ಮುರಳಿ ಆಚಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಬ್ರಿಗೇಡ್ ಅಧ್ಯಕ್ಷ ನಾಗೇಂದ್ರ, ಅಂದು ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಸಮುದಾಯದ ಬಲವರ್ಧನೆ, ವಿಶ್ವಕರ್ಮ ನಿಗಮಕ್ಕೆ ಹೆಚ್ಚಿನ ಅನುದಾನಕ್ಕೆ ಅಂದು ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ. ಜೊತೆಗೆ ಅಂದು ಮಹಿಳೆಯರಿಗೆ ಹೊಲಿಗೆಯಂತ್ರಗಳ ವಿತರಣೆ ಕೂಡ ಇರುತ್ತದೆ. ನಮ್ಮ ಸಮುದಾಯ ಸಾಕಷ್ಟು ಹಿಂದುಳಿದಿದ್ದು ರಾಜಕೀಯ ಪ್ರಾತಿನಿಧ್ಯ ಸಿಗದೆ ನಾವು ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಆಗುತ್ತಿಲ್ಲ. ನಮ್ಮ ಸಮುದಾಯ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಿದೆ. ನಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ವಿಶೇಷ ಯೋಜನೆ ರೂಪಿಸಲು ನಾವು ಒತ್ತಾಯಿಸುತ್ತೇವೆ. ಮುಂದಿನ‌ ದಿನಗಳಲ್ಲಿ ಸಮುದಾಯ ಒಗ್ಗಟ್ಟಿನಿಂದ ಹೋರಾಟವನ್ನ ಮಾಡೋಣ ಎಂದು ಸಭೆಯಲ್ಲಿ ನಿರ್ಧಾರ ಮಾಡಲಾಯಿತು ಎಂದು ತಿಳಿಸಿದರು.

ಸಭೆಯಲ್ಲಿ ವಿಶ್ವಕರ್ಮ ಮುಖಂಡ ಸಿದ್ದಪ್ಪಾಜಿ ವಿಶ್ವಕರ್ಮ, ರಾಮಲಿಂಗಾಚಾರಿ ರುದ್ರೇಶ್ ಇಲವಾಲ ಸೇರಿದಂತೆ ಹಲವಾರು ಸಮುದಾಯ ಮುಖಂಡರು ಭಾಗಿಯಾಗಿದ್ದರು.

Key words: Vishwakarma community, massive convention, Mysore, April 20