ಬೆಂಗಳೂರು,ಮಾರ್ಚ್,12,2025 (www.justkannada.in): ಎಪಿಎಂಸಿ ನಿಯಂತ್ರಣಕ್ಕೆ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ತಿದ್ದುಪಡಿ ವಿಧೇಯಕ್ಕೆ ವಿಧಾನಸಭೆಯು ಅನುಮೋದನೆ ನೀಡಿರುವುದಕ್ಕೆ ಎಫ್‌ಕೆಸಿಸಿಐ ಸ್ವಾಗತಿಸುತ್ತದೆ ಎಂದು FKCCI ಅಧ್ಯಕ್ಷ ಎಂ.ಜಿ ಬಾಲಕೃಷ್ಣ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಡಿ ಮಾರ್ಟ್, ಬಿಗ್ ಬಾಸ್ಕೆಟ್, ಅಮೆಜಾನ್ ಸೇರಿದಂತೆ ಎಲ್ಲಾ ಇ-ಫ್ಲಾಟ್‌ಫಾರ್ಮ್ ವೇದಿಕೆಗಳು ಇನ್ನು ಮುಂದೆ ಎಪಿಎಂಸಿ ನಿಯಂತ್ರಣಕ್ಕೆ ಬರಲಿದ್ದು, ಸೆಸ್ ವಂಚನೆ ತಪ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿರುವ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ವಿಧೇಯಕ್ಕೆ ಅನುಮೋದನೆ ದೊರೆಕಿರುವುದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ತುಂಬು ಹೃದಯದಿಂದ ಸ್ವಾಗತಿಸುತ್ತದೆ ಎಂದಿದ್ದಾರೆ.
ರೈತರು, ವ್ಯಾಪಾರಿಗಳು ಮತ್ತು ಮಳಿಗೆ ಸೇವಾ ಪೂರೈಕೆದಾರರು ಸೇರಿದಂತೆ ಕೃಷಿ ವ್ಯಾಪಾರದಲ್ಲಿ ತೊಡಗಿರುವ ಎಲ್ಲಾ ಪಾಲುದಾರರಿಗೆ ಸಮಾನ ಅವಕಾಶವನ್ನು ಖಾತ್ರಿಪಡಿಸುವಲ್ಲಿ ಈ ಮಸೂದೆಯು ಮಹತ್ವದ ಹೆಜ್ಜೆಯಾಗಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಹೇಳಿದ್ದಾರೆ.
ಈ ತಿದ್ದುಪಡಿಯಿಂದ ಎಪಿಎಂಸಿ ಅಥವಾ ರೈತರನ್ನು ವಂಚನೆ ಮಾಡಲು ಸಾಧ್ಯವಿರುವುದಿಲ್ಲ. ಯಾವುದೇ ವ್ಯಕ್ತಿ ಲೈಸನ್ಸ್ ಪಡೆಯದ ಹೊರತು ಅಧಿಸೂಚಿತ ಕೃಷಿ ಉತ್ಪನ್ನದ ವ್ಯಾಪಾರಕ್ಕಾಗಿ ಇ-ವಾಣಿಜ್ಯ ವೇದಿಕೆ ಸ್ಥಾಪನೆ ಮಾಡುವಂತಿಲ್ಲ. ಇ-ವಾಣಿಜ್ಯ ವೇದಿಕೆ ಸ್ಥಾಪಿಸಲು ಮತ್ತು ನಡೆಸಲು ಬಯಸುವ ಯಾವುದೇ ವ್ಯಕ್ತಿ ಕೃಷಿ ಮಾರುಕಟ್ಟೆ ನಿರ್ದೇಶಕರು ನೇಮಕ ಮಾಡಬಹುದಾದ ವಿಧಾನದಲ್ಲಿ ಶುಲ್ಕ ಮತ್ತು ಠೇವಣಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ.
ಈ ವೇದಿಕೆಯಲ್ಲಿ ನಡೆಯುವ ಸಂಪೂರ್ಣ ವ್ಯಾಪಾರ ಕಾರ್ಯಾಚರಣೆ, ಸಂಬಂಧಿಸಿದ ಕಾರ್ಯಚಟುವಟಿಕೆ, ತೀರ್ಮಾನಗಳಲ್ಲಿ ಪಾರದರ್ಶಕ ಕಡ್ಡಾಯಗೊಳಿಸಲಾಗಿದ್ದು ಹಾಗೂ ಎಲ್ಲಾ ವಹಿವಾಟು ದಾಖಲೆಗಳನ್ನು ವಿದ್ಯುನ್ಮಾನ (online) ನಮೂನೆಯಲ್ಲಿ ನಿರ್ವಹಿಸತಕ್ಕದ್ದಾಗಿರುತ್ತದೆ.
ಈ ಮಸೂದೆ ತರಬೇಕೆಂದು ಎಫ್‌ಕೆಸಿಸಿಐ ನಿರಂತರವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇತ್ತು. ಈಗ ಇದನ್ನು ಎಪಿಎಂಸಿ ಮಸೂದೆಯನ್ನಾಗಿ (Bill) ಮಾಡಿದ್ದಕ್ಕೆ ಎಫ್‌ಕೆಸಿಸಿಐ ಹಾಗೂ ಕರ್ನಾಟಕ ರಾಜ್ಯದ ಎಪಿಎಂಸಿ ವರ್ತಕರ ಪರವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ, ಡಿಸಿಎಂ ಡಿ.ಕೆ.ಶಿವಕುಮಾರ್, ಹಾಗೂ ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರಿಗೆ ಎಫ್‌ಕೆಸಿಸಿಐ ವತಿಯಿಂದ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.
Key words: FKCCI, Karnataka APMC Bill, E-Commerce, Platform, Regulatory Framework