ಬೆಂಗಳೂರು,ಮಾರ್ಚ್,17,2025 (www.justkannada.in): ಕಾಂಗ್ರೆಸ್ ನವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಸಂವಿಧಾನದ ಮೂಲ ತತ್ವದ ವಿರುದ್ದವಾಗಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿ, ಸಮಾಜದಲ್ಲಿ ಕ್ಷೋಭೆ ಉಂಟು ಮಾಡಿ, ತಮ್ಮ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ಜನರಿಗೆ ಮೋಸ ಮಾಡುತ್ತಿದೆ. ರಾಜ್ಯದಲ್ಲಿ ಅಲ್ಪ ಸಂಖ್ಯಾತರಿಗೆ ಶೇ 4% ರಷ್ಟು ಮೀಸಲಾತಿ ನೀಡಿರುವುದು ಅಸಂವಿಧಾನಿಕ. ನಾವು ಅದನ್ನೇ ಬದಲಾಯಿಸಿದ್ದೇವು, ಈಗ ಅದು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಗಿದೆ. ಇದು ಸುಪ್ರೀಂ ಕೋರ್ಟ್ ನಲ್ಲಿ ಇದೆ ಎನ್ನುವುದು ಗೊತ್ತಿದ್ದರೂ, ನಾವು ಹಿಂದುಳಿದ ವರ್ಗದವರಿಗೆ ಕೊಡುತ್ತಿದ್ದೇವೆ ಎಂದು ಹೇಳಿ ಅಲ್ಪಸಂಖ್ಯಾತರಿಗೆ ಶೇ 4% ಮೀಸಲಾತಿ ನೀಡುವುದು ಸಂವಿಧಾನ ಬಾಹಿರ, ಕಾನೂನು ಬಾಹಿರ ಎಂದು ಹೇಳಿದರು.
ನಮ್ಮ ಸಮಾಜದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವುದು ಬೇಡ ಎಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಸಂದರ್ಭದ ಚರ್ಚೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಅಂಬೇಡ್ಕರ್ ಅವರ ಮೂಲತತ್ವ, ಸಂವಿಧಾನದ ಮೂಲತತ್ವಕ್ಕೆ ವಿರುದ್ದವಾಗಿ ಇರುವ ಮೀಸಲಾತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಸಮಾಜದಲ್ಲಿ ಕ್ಷೋಭೆ ಉಂಟು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಸಮಾಜ ಒಡೆದರೇನು, ಬಿಟ್ಟರೇನು ತಮ್ಮ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಬರುವ ದಿನಗಳಲ್ಲಿ ದೊಡ್ಡ ಬೆಲೆ ಕಟ್ಟಬೇಕಾಗುತ್ತದೆ ಎಂದು ಹೇಳಿದರು.
ಅಂಬೇಡ್ಕರ್ ವಿರುದ್ದ ನೆಹರು ಪ್ರಚಾರ
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿರುದ್ದ ಕಾಂಗ್ರೆಸ್ ಎರಡು ಬಾರಿ ಅತ್ಯಂತ ಶ್ರೀಮಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅಂಬೇಡ್ಕರ್ ಅವರನ್ನು ಸೋಲಿಸಿದ್ದರು. ಅಲ್ಲದೇ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರೂ ಅಂಬೇಡ್ಕರ್ ಅವರ ವಿರುದ್ದ ಪ್ರಚಾರ ನಡೆಸಿದ್ದರು. ಸಾವರ್ಕರ್ ಅಂಬೇಡ್ಕರ್ ವಿರುದ್ದ ಪ್ರಚಾರ ಮಾಡಿದ್ದರಾ, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದ್ದು ಜಗಜ್ಜಾಹೀರಾಗಿದೆ. ಸುಮ್ಮನೇ ಈಗ ಇತಿಹಾಸ ತಿರುಚುವ ಕೆಲಸ ಮಾಡಿ ತಮ್ಮ ಪಕ್ಷವನ್ನು ಉಳಿಸಿಕೊಳ್ಳುವ ಕೆಲಸ ಸಾಧುವು ಅಲ್ಲ, ಸಾರ್ಥಕತೆಯೂ ಅಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ತೋಟದ ಮನೆ ತೆರವು ವಿವಾದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಈಗಾಗಲೇ ತಾವೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಈಗಿರುವ ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ ಎಂದರು.
ಕುರ್ಚಿ ಗಟ್ಟಿಗಳಿಸಿಕೊಳ್ಳಲು ಆರ್ ಎಸ್ ಎಸ್ ಅಸ್ತ್ರ
ಆರ್ ಎಸ್ ಎಸ್ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರ್ ಎಸ್ ಎಸ್ ಹುಟ್ಟಿರುವುದೇ ಸೇವೆ ಮಾಡಲು, ಬ್ರಿಟೀಷರ ಕಾಲದಲ್ಲಿ ಕೆಳ ಮಟ್ಟದ ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಹೇಳಿ ಅಂತ್ಯೋದಯ ವಿಚಾರ ಇಟ್ಟುಕೊಂಡು ಆರ್ ಎಸ್ ಎಸ್ ಹುಟ್ಟಿಕೊಂಡಿದೆ. ಸಿಎಂ ಸಿದ್ದರಾಮಯ್ಯ ಅವರು ಆರ್ ಎಸ್ ಎಸ್ ಬೈದರೆ ತಮ್ಮ ಮತ ಬ್ಯಾಂಕ್ ಗಟ್ಟಿಯಾಗುತ್ತದೆ ಎಂದು ತಿಳಿದು ಆರ್ ಎಸ್ ಎಸ್ ವಿರುದ್ದ ಆರೋಪ ಮಾಡುತ್ತಾರೆ. ಆರ್ ಎಸ್ ಎಸ್ ಏನು ಎಂದು ಸ್ವಾತಂತ್ರ್ಯ ಬಂದು ಎಪ್ಪತ್ತೇಳು, ಎಪ್ಪತ್ತೆಂಟು ವರ್ಷದಲ್ಲಿ ಇಡೀ ದೇಶಕ್ಕೆ ಗೊತ್ತಿದೆ. ಕಾಂಗ್ರೆಸ್ ನಾಯಕಿ ಇಂದಿರ ಗಾಂಧಿಯೇ ಆರ್ ಎಸ್ ಎಸ್ ನ್ನು ಹೊಗಳಿದ್ದರು, ಕಾಂಗ್ರೆಸ್ ಮುಖಂಡರಗಿದ್ದ ಪ್ರಣಬ್ ಮುಖರ್ಜಿ ಅವರೇ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸ್ಸಿಗರಲ್ಲ, ಅವರು ಹೊರಗಡೆಯಿಂದ ಬಂದವರು, ಯಾರು ಹೊರಗಡೆಯಿಂದ ಬಂದಿರುತ್ತಾರೊ ಅವರು ತಮ್ಮ ನಿಷ್ಠೆ ತೋರಿಸಲು ಪದೇ ಪದೇ ಮಾತನಾಡುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವ ಗಟ್ಟಿಗೊಳಿಸಿಕೊಳ್ಳಲು ಆರ್ ಎಸ್ ಎಸ್ ನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಆರ್. ಎಸ್ ಎಸ್ ಏನು ಎಂದು ಎಲ್ಲ ಜನರಿಗೂ ಗೊತ್ತಿದೆ ಎಂದು ಹೇಳಿದರು.
Key words: Reservation, Minorities, against, Constitution, Former CM, Bommai