ಪುಸ್ತಕ ಪ್ರೀತಿಸದೇ ಇರುವವರು ಪುಸ್ತಕವನ್ನು ಓದಲಿಕ್ಕೆ ಸಾಧ್ಯವಾಗುವುದಿಲ್ಲ- ಮಂಡ್ಯ ಡಿಸಿ ಡಾ.ಕುಮಾರ

ಮೈಸೂರು,ಮಾರ್ಚ್,18,2025 (www.justkannada.in): ಯಾರಿಗೆ ಪುಸ್ತಕದ ಮೇಲೆ ಪ್ರೀತಿ ಇದೆಯೋ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಸಹ ಪುಸ್ತಕವನ್ನು ಪ್ರೀತಿಸಬೇಕು. ಪುಸ್ತಕವನ್ನು ಪ್ರೀತಿಸದೇ ಇರುವವರು ಪುಸ್ತಕವನ್ನು ಓದಲಿಕ್ಕೆ ಸಾಧ್ಯವಾಗುವುದಿಲ್ಲ ಎಂದು ಮಂಡ್ಯ  ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ “ಮಾನಸ ಯುವ ಸಂವರ್ಧನೆ-2025” (ಔದ್ಯೋಗಿಕ ಮತ್ತು ಯುವ ಸಬಲೀಕರಣ ಕಾರ್ಯಾಗಾರ) ವನ್ನು ಉದ್ಘಾಟಿಸಿ ಡಾ. ಕುಮಾರ ಅವರು ಮಾತನಾಡಿದರು.  ಪ್ರತಿಯೊಬ್ಬರು ಮೊದಲು ಪುಸ್ತಕದ ಪ್ರೇಮಿ ಆಗಬೇಕು. ಹೆಚ್ಚು ಹೆಚ್ಚು ಪುಸ್ತಕವನ್ನು ಓದಬೇಕು ಮೊಬೈಲ್  ಗಳನ್ನು ನೋಡುವ ಬದಲು ಪುಸ್ತಕವನ್ನು ಓದಿದರೆ ಅದು ನಿಮ್ಮನ್ನು ತಲೆಯೆತ್ತಿ ನಡೆಯುವಂತೆ ಮಾಡುತ್ತದೆ ಎಂದು ತಿಳಿಸಿದರು.

ಗುರಿಯನ್ನು ದಾಟಲು ಹಲವಾರು ಅಡೆತಡೆಗಳು ಬರಬಹುದು,  ಬಂದರೂ ನಾವು ಕುಗ್ಗದೆ ಹಿಗ್ಗಬೇಕು, ಹೆಮ್ಮೆ ಪಡಬೇಕು. ನಾವು ಸಮಸ್ಯೆಗಳನ್ನು ಸ್ವಾಗತ ಮಾಡಬೇಕು. ಏಕೆಂದರೆ ಆಗಲೇ ನಮಗೆ ಎಷ್ಟು ಸಾಮರ್ಥ್ಯ ಶಕ್ತಿ ಇದೆ ಎಂದು ತಿಳಿಯುವುದು ಎಂದು ಹೇಳಿದರು.

ನೀವು ಯಾವುದೇ ರೀತಿ ಸಮಸ್ಯೆಗಳನ್ನು ತಲೆಗೆ ಹಾಕಿಕೊಳ್ಳದೆ ಇದ್ದರೆ ಸಮಸ್ಯೆಗಳನ್ನು ಎದುರಿಸದೆ ಇದ್ದರೆ ನಿಮಗೆ ಹೇಗೆ ತಿಳಿಯುತ್ತದೆ ನಿಮ್ಮಲ್ಲಿ ಎಷ್ಟು ಸಾಮರ್ಥ್ಯ ಶಕ್ತಿ ಇದೆ ಎಂದು.  ಅದಕ್ಕೆ ಸಮಸ್ಯೆಗಳನ್ನು ಸ್ವಾಗತ ಮಾಡಬೇಕು. ನಿಮ್ಮಲ್ಲಿ ಆಂತರ್ಯ ಶಕ್ತಿ ಇದೆ.  ಅದನ್ನು ಹೇಗೆ ಎದುರಿಸಬೇಕು ತಿಳಿಯಬೇಕು ಎಂದು ತಿಳಿಸಿದರು.

ಯಾವಾಗಲೂ ಜೀವನದಲ್ಲಿ ಯಶಸ್ವಿಯಾಗಬೇಕು ಎಂದರೆ ನದಿಯ ರೀತಿಯಲ್ಲಿ ಗುರಿಯನ್ನು ಇಟ್ಟಿಕೊಳ್ಳಬೇಕು. ಏಕೆಂದರೆ ನದಿ ಯಾವಾಗಲೂ ಸಮುದ್ರವನ್ನು ತಲುಪುತ್ತದೆ. ಹಾಗೆ ನಮ್ಮ ಜೀವನದಲ್ಲೂ ನದಿಯ ರೀತಿಯಲ್ಲಿ ಗುರಿಯನ್ನು ಇಟ್ಟುಕೊಳ್ಳಬೇಕು. ಎಂದು ಹೇಳಿದರು.

ನಾವು ಯಾವುದೇ ಸಮಸ್ಯೆಗಳು ಕಷ್ಟಗಳು ಬಂದರು ಕೂಡ ನಾವು ನಮ್ಮ ಯಶಸ್ವಿಯ ದಾರಿಯನ್ನು ಬಿಡಬಾರದು. ಎಷ್ಟೇ ಅಡೆತಡೆಗಳು ಬಂದರೂ ಕೂಡ ಮೊದಲು ನಾವು ನಮ್ಮ ಗುರಿಯ ಕಡೆ ಮಾತ್ರ ಗಮನವನ್ನು ಇಟ್ಟುಕೊಳ್ಳಬೇಕು. ಆಗ ಮಾತ್ರ ಯಶಸ್ವಿಯ ದಾರಿಯಲ್ಲಿ ನಾವು ಹೋಗಲು ಸಾಧ್ಯ ಎಂದು ತಿಳಿಸಿದರು.

ಗುರಿಯನ್ನು ತಲುಪಲು ಅನಗತ್ಯ ಆಕಾಂಕ್ಷೆ, ಆಸೆಗಳನ್ನು ಬಿಡಬೇಕು. ಆಗ ಮಾತ್ರ ಗುರಿಯ ಕಡೆಗೆ ತಲುಪಲು ಸಾಧ್ಯ. ಸಾಧನೆಯನ್ನು ಮಾಡಬೇಕು ಎಂದರೆ ಕಂಫರ್ಟ್ ಝೋನ್ ಇಂದ ಹೊರಗೆ ಮೊದಲು ಬರಬೇಕು. ಸಮಯವನ್ನು ಕಳೆಯದೆ ಹೆಚ್ಚಾಗಿ ಗುರಿಯ ಕಡೆಗೆ ಗಮನವನ್ನು ಇಟ್ಟುಕೊಳ್ಳಬೇಕು. ಭಾವನೆಗಳಿಗೆ ಹೆಚ್ಚು ಆದ್ಯತೆಯನ್ನು ಕೊಡಬಾರದು. ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು. ನಂಬಿಕೆ ಇದ್ದರೆ ಆಗ ಮಾತ್ರ ಸಾಧನೆ ಮಾಡಲಿಕ್ಕೆ ಸಾಧ್ಯವಾಗುತ್ತದೆ. ಎಷ್ಟು ದೇವರನ್ನು ನಂಬಿದರೇನಂತೆ ನಿನ್ನನು ನೀನು ನಂಬದೆ ಇದ್ದಾಗ ಎನ್ನುವ ಕುವೆಂಪು ಅವರ ಮಾತಿನಂತೆ ನಿಮ್ಮನ್ನು ನೀವು ಮೊದಲು ನಂಬಬೇಕು ಎಂದು ಡಾ.ಕುಮಾರ ಅವರು ಕಿವಿಮಾತು ಹೇಳಿದರು.

ನಮ್ಮ ವೈಯಕ್ತಿಕ ಜೀವನದ ಮೇಲೆ ಹೆಮ್ಮೆ ಇರಬೇಕು. ನಿಮ್ಮ ಮೌಲ್ಯಗಳ ಮೇಲೆ ಹೆಮ್ಮೆ ಇರಬೇಕು. ನಮ್ಮ ನಡೆ ನುಡಿಯ ಮೇಲೆ ಹೆಮ್ಮೆ ಇರಬೇಕು. ನಮ್ಮನ್ನು ನಾವು ಇಷ್ಟ ಪಡಬೇಕು. ಬೇರೆಯವರು ಇಷ್ಟಪಟ್ಟಿಲ್ಲ ಅಂತ ಯಾವುತ್ತು ಚಿಂತಿಸಬಾರದು. ಮೊದಲು ನಿಮ್ಮನ್ನು ನೀವು ಪ್ರೀತಿಸಬೇಕು. ಅಂತರ್ ಶಕ್ತಿಗೆ ಒಪ್ಪಿಗೆ ಹಾಕುವ ರೀತಿಯಲ್ಲಿ ದಿನ ಬದುಕಬೇಕು ಎಂದು ತಿಳಿಸಿದರು.

ಪ್ರತಿ ನಿಮಿಷ ಕೂಡ ತುಂಬಾ ಮುಖ್ಯವಾಗುತ್ತದೆ. ಅದಕ್ಕೆ ಯಾವುದೇ ರೀತಿಯಿಂದ ಸಮಯವನ್ನು ವ್ಯರ್ಥ ಮಾಡದೆ ಜೀವನದಲ್ಲಿ ಹಲವಾರು ರೀತಿಯಿಂದ ವಿಷಯವನ್ನು ಕಲಿಯಬೇಕು. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಯ ಒಂದು ಸಲ ಕಳೆದುಹೋದರೆ ಮತ್ತೆ ಬಾರದು. ಸರಿಯಾದ ಸಮಯವನ್ನು ಉಪಯೋಗ ಮಾಡಿಕೊಳ್ಳಬೇಕು. ಗುರಿಯ ಕಡೆಗೆ ತಲುಪುವುದಕ್ಕೆ ಹೆಚ್ಚಾಗಿ ಧನಾತ್ಮಕವಾಗಿ ಯೋಜನೆಯನ್ನು ಮಾಡಬೇಕು ಎಂದು ಹೇಳಿದರು.

ಮೈಸೂರು ವಿವಿ ಕುಲಪತಿ ಎನ್.ಕೆ.ಲೋಕನಾಥ್ ಅವರು ಮಾತನಾಡಿ, ವಿದ್ಯೆ ಎಂಬುದು ಬಹಳ ಮುಖ್ಯವಾಗುತ್ತದೆ. ಯಾವುದೇ ರೀತಿಯಲ್ಲಿ ಸಂಸ್ಕಾರವನ್ನು ಕಲಿಯಬೇಕು ಎಂದರೂ ಕೂಡ ವಿದ್ಯೆಯೆಂಬುದು ಪ್ರತಿಯೊಬ್ಬರಿಗೂ ಕೂಡ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ಬರಿ ಪಠ್ಯಪುಸ್ತಕಗಳನ್ನು ಮಾತ್ರಕ್ಕೆ ಸಿಮಿತವಾಗದೇ ಹಲವಾರು ರೀತಿಯ ಪುಸ್ತಕಗಳನ್ನು ಓದಿ ಜ್ಙಾನವನ್ನು ಬೆಳೆಸಿಕೊಳ್ಳಬೇಕು ನಮ್ಮ ಜೀವನದಲ್ಲಿ ಆರೋಗ್ಯ ಕೂಡ ಬಹಳ ಮುಖ್ಯವಾಗುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ಕೊಡಬೇಕು. ಹಾಗೆ ಗುರಿಯ ಕಡೆಯು ಗಮನವನ್ನು ನೀಡಬೇಕು ಎಂದು ಹೇಳಿದರು.

ನಮ್ಮ ಸುತ್ತಮುತ್ತಲಿನ ಸ್ನೇಹಿತರು ಜನರು ಕೂಡ ಅಷ್ಟೇ ಒಳ್ಳೆಯ ಸಂಗಗಳನ್ನು ಮಾಡಬೇಕು. ಒಳ್ಳೆಯ ದಾರಿ ಕಡೆ ಹೋಗುವುದಕ್ಕೆ ಒಂದೇ ದಾರಿ ಇರುತ್ತದೆ. ಆದರೆ ಕೆಟ್ಟ ದಾರಿಯ ಕಡೆಗೆ ಹೋಗುವುದಕ್ಕೆ ಹಲವಾರು ದಾರಿಗಳು ಇರುತ್ತದೆ. ಗುರಿಯನ್ನು ತಲುಪಲು ಒಂದೇ ದಾರಿಯ ಕಡೆಗೆ ವಿದ್ಯಾರ್ಥಿಗಳು ಹೋಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಎಂ.ಕೆ ಸವಿತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ (ಪರೀಕ್ಷಾಂಗ) ಎನ್.ನಾಗರಾಜ, ಮೈಸೂರು ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಗಳಾದ ಕೆ.ಎಸ್ ರೇಖಾ ಉಪಸ್ಥಿತರಿದ್ದರು.

Key words: books, read, Mysore University, Mandya DC, Dr. Kumar