“ಮಾನಸ ಯುವ ಸಂವರ್ಧನೆ-2025” : ವಿದ್ಯಾರ್ಥಿಗಳಿಗೆ ಅತಿಥಿಗಳಿಂದ  ಸ್ಪರ್ಧಾತ್ಮಕ ಪರೀಕ್ಷೆಗೆ  ಟಿಪ್ಸ್.!

ಮೈಸೂರು, ಮಾ.19, 2025 : ಯಶಸ್ಸನ್ನು ಕಾಣಲು ಒಂದು ದೊಡ್ಡ ಗುರಿಯನ್ನು ಇಟ್ಟುಕೊಳ್ಳಬೇಕು. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿಫಲವಾದರೆ ಎದೆಗುಂದದೆ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಪರಿಶ್ರಮ ಮೂಲಕ ಸಾಗಿದರೆ ಯಶಸ್ಸು ಸಿಗುತ್ತದೆ ಎಂದು  ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಎ.ಎನ್. ಪ್ರಕಾಶ್ ಗೌಡ ಕಿವಿಮಾತು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ “ಮಾನಸ ಯುವ ಸಂವರ್ಧನೆ-2025” ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿಂದು ಭಾಗವಹಿಸಿ ಮಾತನಾಡಿದರು.

ವ್ಯಾಪಾರವಿರಲಿ,  ವ್ಯವಸಾಯವಿರಲಿ ಪ್ರತಿಯೊಂದು ಕ್ಷೇತ್ರದಲ್ಲೂ ಅದರದೇ ಆದಂತಹ ಮಹತ್ವವಿರುತ್ತದೆ. ಅದರಲ್ಲಿ ನಮ್ಮ ಆಯ್ಕೆ ಯಾವುದು ಎಂಬುದು ಬಹಳ ಮುಖ್ಯವಾಗುತ್ತದೆ. ಒಂದು ದೊಡ್ಡ ಗುರಿಯನ್ನು ಇಟ್ಟುಕೊಂಡರೆ ಬಹುಶಃ ತಲುಪುವಂತಹ ಗುರಿ ಕಾರಣಾಂತರದಿಂದ ವಿಫಲವಾದರು, ಒಂದಷ್ಟು ದೂರವಾದರೂ ಸಾಗಬಹುದು. ಆದರೆ, ನಾವು ನಡೆಯಲಿಕ್ಕೆ ಯೋಚನೆ ಮಾಡದಿದ್ದರೆ, ಯಾವುದೇ ಗುರಿಯನ್ನು ತಲುಪಲು ಸಾಧ್ಯವಾಗುವುದಿಲ್ಲ ಎಂದರು.

ಹಲವಾರು ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತದೆ ಅವನೆಲ್ಲಾ ನೀವು ಉಪಯೋಗಿಸಿಕೊಳ್ಳಬೇಕು.  ಒಂದು ವರ್ಷ ಎರಡು ವರ್ಷ ತರಬೇತಿ ಪಡೆದು ಯಾವುದೇ ಪರೀಕ್ಷೆಯಲ್ಲೂ ಉತ್ತೀರ್ಣರಾಗದೆ ಇದ್ದಾಗ ಕೈ ಚೆಲ್ಲಿ ಮನೆಯಲ್ಲಿ ಕೂರುವ ಬದಲು ಅವಕಾಶ ಸಿಕ್ಕ ಎಲ್ಲಾ ಪರೀಕ್ಷೆಗಳನ್ನು ಎದುರಿಸುವ  ಮೂಲಕ ಸಾಕಷ್ಟು ಪರಿಣಿತಿ ಹೊಂದಬಹುದು ಎಂದರು.

ಸಾಕಷ್ಟು ಜನ ಅಪ್ಲಿಕೇಶನ್ ಹಾಕುವ ಸಮಯದಲ್ಲಿ ಕೊನೆಯ ದಿನದವರೆಗೂ ಕಾದು ಹಾಕುವುದು ಇಂತಹ ಪ್ರವೃತ್ತಿಯನ್ನು ಬಿಟ್ಟು ಪ್ರತಿಕ್ಷಣ ಪ್ರತಿದಿನ ಏನೇನೋ ಆಗುತ್ತದೆ ಎಂದು ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಬೇಕು. ಪತ್ರಿಕೆಗಳಲ್ಲಿ ಟಿವಿ ಮಾಧ್ಯಮಗಳಲ್ಲಿ ಏನು ಬರುತ್ತದೆ. ನಮ್ಮ ಸುತ್ತ ಮುತ್ತ ಏನು ಆಗುತ್ತದೆ ಎನ್ನುವುದನ್ನು ಸಂಗ್ರಹ ಮಾಡಿ ಇಟ್ಟುಕೊಂಡು ನಾಳೆ ಮಾಡುವಂತಹ ಕೆಲಸವನ್ನು ಇವತ್ತೇ ಮಾಡುತ್ತಾ ಬಂದರೆ ಬಹುಶಃ ಯಾವುದೇ ಪರೀಕ್ಷೆಗಳನ್ನು ಬರೆದು ಯಶಸ್ಸು ನಡೆಯಬಹುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಸಾಹದಿಂದ ಕಲಿಯಬೇಕು. ಇಂತಹ ಉತ್ಸಾಹಕವನ್ನು ಕೊನೆಯವರೆಗೂ ಇಟ್ಟುಕೊಂಡು  ಪರೀಕ್ಷೆಗಳಲ್ಲಿ ಯಶಸ್ವಿಯನ್ನು ಕಾಣುತ್ತೀರ ಎಂದು ಕಿವಿ ಮಾತು ಹೇಳಿದರು.

ಕೆಲವರು ಪರೀಕ್ಷೆಗೆ ತಾವು ನಡೆಸುವ ಸಿದ್ಧತೆ ಸ್ನೇಹಿತರಿಗೆ ಗೊತ್ತಾಗದಂತೆ ಗೌಪ್ಯತೆ ಕಾಯ್ದುಕೊಳ್ಳುತ್ತಾರೆ. ಇದು ತಪ್ಪು, ಪರೀಕ್ಷೆಗಳಿಗೆ ಸಿದ್ದತೆ ನಡೆಸುವಾಗ ಎಲ್ಲರೂ ಮುಕ್ತವಾಗಿ ನಿಮ್ಮ ಮಾಹಿತಿ ಹಂಚಿಕೊಳ್ಳಿ. ಇದರಿಂದ ನಿಮ್ಮ ಜ್ಞಾನ ಹೆಚ್ಚಾಗುತ್ತದೆಯೇ  ಹೊರತು ಕಡಿಮೆ ಆಗುವುದಿಲ್ಲ ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಎಂ .ಕೆ ಸವಿತಾ ಮಾತನಾಡಿ,  ಇವತ್ತಿನ ಸ್ಪರ್ಧಾತ್ಮಕ ಯುಗದಲ್ಲಿ ನೀವು ಬರೀ ಪಠ್ಯಪುಸ್ತಕಗಳನ್ನು ಓದುತ್ತಾ ಇದ್ದರೆ ಅದು ಪ್ರಯೋಜನಕ್ಕೆ ಬಾರದು. ಸಾಮಾನ್ಯ ಜ್ಞಾನವನ್ನು ನಿಮ್ಮ ಪದವಿ ಹಂತದಲ್ಲಿ ಕಲಿಯಬೇಕು. ನೀವು ಸಾಕಷ್ಟು ರೀತಿಯಲ್ಲಿ ಕಲಿಯುವ ಅವಕಾಶಗಳು ನಿಮ್ಮ ಕೈಯಲ್ಲೇ ಇವೆ. ಅದನ್ನು ಒಳ್ಳೆಯ ರೀತಿಯಿಂದ ಆಯ್ಕೆ ಮಾಡಿಕೊಂಡು ಕಲಿಯಬೇಕು ಎಂದರು.

ಸಾಮಾನ್ಯ ಜ್ಞಾನಕ್ಕೋಸ್ಕರ ಪತ್ರಿಕೆಗಳನ್ನು ದಿನ ಓದಬೇಕು.  ನೀವು ಎಷ್ಟರಮಟ್ಟಿಗೆ ಸಾಮಾನ್ಯ ಜ್ಞಾನ ಹಾಗೂ ಪತ್ರಿಕೆಗಳನ್ನು ಓದುತ್ತೀರೋ ಅಷ್ಟರಮಟ್ಟಿಗೆ ನಿಮಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಎನ್.ಕೆ. ಲೋಕನಾಥ್, ಮೈಸೂರು ವಿಶ್ವವಿದ್ಯಾಲಯದ ಕುಲ ಸಚಿವ( ಪರೀಕ್ಷಾಂಗ) ಎನ್.ನಾಗರಾಜು. ಮಾನಸ ಯುವ ಸಂದರ್ಶನ-2025 ಸಲಹಾ ಸಮಿತಿಯ ಅಧ್ಯಕ್ಷ ಪ್ರೊ. ಡಿ ಆನಂದ್  ಉಪಸ್ಥಿತರಿದ್ದರು.

key words: “Manasa Yuva Samvardhana-2025”, IPS Prakash Gowda, VC Loknath, uom, university, Mysore

summary:

“Manasa Yuva Samvardhana-2025”: Tips for competitive exams from guests for students!