ಮೈಸೂರು,ಮಾರ್ಚ್,26,2025 (www.justkannada.in): ರೈತರಿಗೆ ಸಮಯಕ್ಕೆ ಸರಿಯಾಗಿ ಸಾಲ ನೀಡದ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಎಂಡಿಸಿಸಿ ಬ್ಯಾಂಕ್ ಬಳಿ ಹುಣಸೂರು ರೈತರು ಪ್ರತಿಭಟನೆ ನಡೆಸಿ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹುಣಸೂರು ಶಾಸಕ ಜಿ.ಡಿ ಹರೀಶ್ ಗೌಡ ನೇತೃತ್ವದಲ್ಲಿ ಎಂಡಿಸಿಸಿ ಬ್ಯಾಂಕ್ ಮುಂಭಾಗ ರೈತರು ಪ್ರತಿಭಟನಾ ಧರಣಿ ನಡೆಸಿದ್ದು ಹಣಸೂರಿನ ತಾಲೂಕಿನ ಹಲವು ಕೃಷಿ ಪತ್ತಿನ ಸಹಕಾರಿ ಸಂಘಗಳ ಸದಸ್ಯರು ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಹುಣಸೂರು ಶಾಸಕ ಜಿ.ಡಿ ಹರೀಶ್ ಗೌಡ, ಸಾಲ ಮರುಪಾವತಿ ಮಾಡಿದ್ದರೂ ರೈತರಿಗೆ ಸಾಲ ಕೊಡುತ್ತಿಲ್ಲ. ಬ್ಯಾಂಕ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಸಾಲ ಕೊಡಲು ಕೂಡ ರಾಜಕೀಯ ಮಾಡುತ್ತಾರೆ. ಕಾಂಗ್ರೆಸ್, ಬಿಜೆಪಿ,ಜೆಡಿಎಸ್ ಅಂತ ತಾರತಮ್ಯ ಮಾಡುತ್ತಾರೆ. ರೈತರಲ್ಲಿ ಯಾಕೆ ತಾರತಮ್ಯ ಮಾಡುತ್ತೀರಿ ಎಂದು ಕಿಡಿಕಾರಿದರು.
ಸಾಲ ಪಡೆಯಲು ಆನ್ ಲೈನ್ ಮೂಲಕ ಲಂಚ ಪಡೆದ ಅಧಿಕಾರಿಯ ದಾಖಲೆ ಬಿಡುಗಡೆ ಮಾಡಿದ ಶಾಸಕ ಹರೀಶ್ ಗೌಡ, ರೈತರಿಗೆ ಮೋಸವನ್ನ ಮಾಡುತ್ತಿದ್ದಾರೆ. ನಮ್ಮ ಕುಟುಂಬವನ್ನ ಸಹಕಾರಿ ಕ್ಷೇತ್ರದಿಂದ ದೂರ ಇಡುವ ಪ್ರಯತ್ನ ನಡೆಯುತ್ತಿದೆ. ನಮ್ಮ ರೈತರಿಗೆ ಒಳಿತಾಗುತ್ತೆ ಅಂದರೆ ನಾನು ಅದನ್ನೂ ತ್ಯಾಗ ಮಾಡಲಿಕ್ಕೆ ಸಿದ್ದನಿದ್ದೇನೆ. ರೈತರಿಗೆ ದಯವಿಟ್ಟು ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿದರು.
ಎಂ.ಡಿ.ಸಿ.ಸಿ ಬ್ಯಾಂಕ್ ದಿವಾಳಿ ಆಗಿದೆ. ರೈತರಲ್ಲೂ ಜೆಡಿಎಸ್,ಬಿಜೆಪಿ,ಕಾಂಗ್ರೆಸ್ ಎಂಬಂತಾಗಿದೆ. ಹುಣಸೂರಿನ ರೈತರಿಗೆ ಎಂ.ಡಿ.ಸಿ.ಸಿ ಬ್ಯಾಂಕ್ ನಲ್ಲಿ ಸಾಲ ಕೊಡುತ್ತಿಲ್ಲ. ಕಳೆದ 5 ತಿಂಗಳಿನಿಂದಲೂ ಕೂಡ ರೈತರನ್ನು ಆಟ ಆಡಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಜಿಟಿಡಿ ಕುಟುಂಬದ ಹಿಡಿತ ತಪ್ಪಿಸಲು ರೈತರನ್ನು ಟಾರ್ಗೆಟ್ ಮಾಡ್ತಿದ್ದಾರೆ. ಹನಗೂಡು, ಧರ್ಮಪುರ ಸಹಕಾರಿ ಬ್ಯಾಂಕ್ ಗಳಲ್ಲಿ ರೈತರಿಗೆ ಸಾಲ ಕಟ್ಟಿದ್ದರೂ ಸಾಲ ನೀಡುತ್ತಿಲ್ಲ. ಸಾಲ ಕೊಡಲು ಕೂಡ ಲಂಚ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಹುಣಸೂರಿನಲ್ಲಿ 15 ವರ್ಷಗಳಿಂದಲೂ ಅಧಿಕಾರದಲ್ಲಿದ್ದ ನಾಯಕರು ಇದರ ಹಿಂದೆ ಇದ್ದಾರೆ. ಅವರೇ ಖುದ್ದು ರೈತರಿಗೆ ಸಾಲ ನೀಡದಂತೆ ನಿರ್ದೇಶನ ನೀಡಿದ್ದಾರೆ. ಬ್ಯಾಂಕ್ ಆಡಳಿತಾಧಿಕಾರಿ ರೈತರ ಹಿತ ಮರೆತು ಆ ನಾಯಕರ ಮಾತಿಗೆ ಕುಣಿಯುತ್ತಿದ್ದಾರೆ. ನಾನು ಒಬ್ಬ ಹಾಲಿ ಶಾಸಕನಾಗಿ ರೈತರ ಪರ ಇಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದೇನೆ. ನಾನು ಸಹಕಾರಿ ಬ್ಯಾಂಕ್ ಕಡೆ ತಲೆ ಹಾಕಬಾರದು ಅಂತ ಈ ರೀತಿ ಮಾಡುತ್ತಿದ್ದಾರೆ. ನಾನು ಕೈ ಮುಗಿದು ಕೇಳುತ್ತೇನೆ. ರೈತರ ಪರವಾಗಿ ಕೆಲಸ ಮಾಡಿ ನಾನು ಬರೋದೇ ಇಲ್ಲ. ನಾನು ಬರಬಾರದು ಅಂತಾನೇ ಚುನಾವಣೆ ನಡೆಸಿಲ್ಲ. ಈಗ ಸಾಲ ನೀಡದೆ ಇನ್ನೊಂದು ರೀತಿಯ ಆಟ ಆಡ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
Key words: Protest, farmers, MDCC Bank, Mysore