ಕ್ರೌರ್ಯದ ಭಾರತಕ್ಕೆ ಮಾನವ ಮೈತ್ರಿ ಮದ್ದು- ಕೆ.ದೀಪಕ್

ಮೈಸೂರು,ಮಾರ್ಚ್,26, 2025 (www.justkannada.in):  ಕ್ರೌರ್ಯ ತುಂಬಿದ ಭಾರತಕ್ಕೆ ಮಾನವ ಮೈತ್ರಿಯ ಅಗತ್ಯವಿದ್ದು ಬುದ್ಧನ ಕಡೆಗೆ ನಮ್ಮ ಪಯಣ ಸಾಗಬೇಕಿದೆ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದರು.

ಮೈಸೂರಿನಲ್ಲಿ ಏಪ್ರಿಲ್ 5 ಮತ್ತು 6 ರಂದು ನಡೆಯಲಿರುವ ಮಾನವ ಮೈತ್ರಿ ಸಂಪದ ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿ, ವೈಜ್ಞಾನಿಕ ತಳಹದಿಯ ಮೇಲೆ ಸ್ಥಾಪಿತವಾಗಿರುವ ಬೌದ್ಧ ಧರ್ಮ ಸತ್ಯದ ಧರ್ಮ ಎಂದು ಬಣ್ಣಿಸಿದರು.

ಮನುಷ್ಯನಿಲ್ಲದ ದೇಶವನ್ನು ದೇಶವೆಂದು ಕರೆಯಲಾಗದು. ಆದರೆ, ಕ್ರೌರ್ಯ ತುಂಬಿದ ಭಾರತದಲ್ಲಿ ಮನುಷ್ಯ ಮತ್ತು ಮನುಷ್ಯತ್ವ ಬಿಟ್ಟು ಎಲ್ಲದರ ಬಗ್ಗೆ ಚರ್ಚೆಯಾಗುತ್ತಿದೆ. ಭಾರತವನ್ನು ಅಸಮಾನತೆ, ಕ್ರೌರ್ಯ, ಅಮಾನವೀಯ ಕೃತ್ಯಗಳಿಂದ ಮುಕ್ತಗೊಳಿಸಲು ಧಮ್ಮ ಮಾರ್ಗದ ಕಡೆಗೆ ಮನುಕುಲವನ್ನು ಕೊಂಡೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ನಡೆಯುತ್ತಿರುವ ‘ ಮಾನವ ಮೈತ್ರಿ ಸಂಪದ ಸಮ್ಮೇಳನ’ ಒಂದು ಐತಿಹಾಸಿಕೆ ಹೆಜ್ಜೆ ಗುರುತಾಗಲಿದೆ ಎಂದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಅಂಬೇಡ್ಕರ್ ಕಂಡ ಬೌದ್ಧ ಭಾರತ ನಿರ್ಮಾಣದ ಕನಸನ್ನು ನನಸು ಮಾಡುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಂಜನಗೂಡಿನ 150ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಧಮ್ಮ ಜ್ಯೋತಿ ಹೊರಡಿಸಿ 30 ಸಾವಿರ ಕುಟುಂಬಗಳನ್ನು ಮುಟ್ಟಿದ್ದೇವೆ. ಇದರ ಜ್ಯೋತಕವಾಗಿ ಸಂಪಮ್ಮೇಳನ ನಡೆಯುತ್ತಿದೆ. ಸಮ್ಮೇಳನದ ಪೂರ್ಣ ಮಾಹಿತಿ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಅಂಬೇಡ್ಕರ್ ವಾದಿ ಹ.ರ.ಮಹೇಶ್ ಮಾತನಾಡಿ, ನಮ್ಮ  ಅಂಬೇಡ್ಕರ್ ಸಾಹಿತ್ಯ ಅಕಾಡೆಮಿಯು 03ನೇ ಅಕ್ಟೋಬರ್ 2024 ರಂದು ಆರಂಭಿಸಿದ ‘ಅಂಬೇಡ್ಕರ್ ಅರಿವಿನ ಮಾರ್ಗ’ ದಲ್ಲಿ “ಧಮ್ಮ ಪಯಣ” ಎಂಬ ವಿನೂತನ ಅರಿವಿನ ಪಯಣವನ್ನು ಹಳ್ಳಿ ಹಳ್ಳಿಗಳಲ್ಲಿ  ಎಲ್ಲಾ ಜನ ಸಮೂಹಗಳನ್ನು ಒಳಗೊಂಡಂತೆ, ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸಿ, 10,000 ಕಿ.ಮೀಗಳ ಪಯಣವನ್ನು  ಪೂರ್ಣಗೊಳಿಸಿದೆ. ಹೀಗೆ ಸಾಗುತ್ತಾ 150 ಗ್ರಾಮಗಳನ್ನು 35,000 ಕುಟುಂಬಗಳನ್ನು 3 ಲಕ್ಷಕ್ಕೂ ಅಧಿಕ ಜನರನ್ನು ನೇರವಾಗಿ ಸಂಪರ್ಕಿಸುತ್ತಾ, ಪ್ರತಿ ಮನೆಮನೆಯಮುಂದೆ ಸಾಗುತ್ತಾ , ಲಕ್ಷಾಂತರ ಅರಿವಿನ ದೀಪಗಳನ್ನು ಹಚ್ಚಲಾಗಿದೆ. ಮಹಿಳೆಯರು, ಮಕ್ಕಳು ಹಾಗೂ ದುಡಿಯುವ ವರ್ಗವನ್ನು ಒಳಗೊಳ್ಳುತ್ತಾ,  ಈ ಅರಿವಿನ ಮಾರ್ಗವನ್ನು ಸಾಮಾನ್ಯ ಜನರೆಡೆಗೆ ಕೊಂಡಯ್ಯಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಅಹಿಂದ ಜವರಪ್ಪ, ಮೈಸೂರು ವಿವಿ ದಲಿತ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಪುನೀತ್, ಮೈವಿವಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್ ಹಾಜರಿದ್ದರು.

Key words: Human, alliance,  India, cruelty, K Deepak