ಬೆಂಗಳೂರು,ಮಾರ್ಚ್,28,2025 (www.justkannada.in): ದೆಹಲಿಯ ಪ್ರವಾಸದ ವೇಳೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನ ಭೇಟಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, ದೆಹಲಿ ಭೇಟಿಯ ಹಿಂದೆ ಯಾವುದೇ ರಾಜಕೀಯ ಪ್ರಸ್ತಾಪವಿಲ್ಲ. ಕೇವಲ ಅಭಿವೃದ್ಧಿ ವಿಚಾರಗಳಷ್ಟೇ ಚರ್ಚೆಯಾಗಿವೆ. ಕೇಂದ್ರ ಸಚಿವರ ಭೇಟಿ ಪೂರ್ವ ನಿಗದಿಯಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಭೇಟಿ ಆಕಸ್ಮಿಕ. ಸಂಸತ್ ಗೆ ತೆರಳುವ ಮಾರ್ಗದಲ್ಲಿ ಅವರ ಕಚೇರಿ ಇದೆ. ಅಲ್ಲಿ ಅವರನ್ನು ಭೇಟಿಯಾಗಿದ್ದೇನೆ ಅಷ್ಟೆ. ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ 138 ಮಂದಿ ಶಾಸಕರಿದ್ದು ಈಗಿರುವಾಗ ಜೆಡಿಎಸ್ನ ಕುಮಾರಸ್ವಾಮಿ ಅವರ ಸಹಕಾರದ ಪ್ರಶ್ನೆ ಉದ್ಭವಿಸುವುದಿಲ್ಲ. ಕುಮಾರಸ್ವಾಮಿ, ಸೋಮಣ್ಣ ಅವರಂತೆ ಪ್ರಹ್ಲಾದ್ ಜೋಶಿ ಅವರನ್ನೂ ಭೇಟಿ ಮಾಡಿದ್ದಾನೆ. ಬೆಳಗಾವಿ ವಿಮಾನ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿದೆ. ಅವುಗಳನ್ನು ಚುರುಕುಗೊಳಿಸುವ ಸಲುವಾಗಿ ಚರ್ಚೆ ಮಾಡಲಾಗಿದೆ ಎಂದರು.
ಹಾಗೆಯೇ ನಮ್ಮ ಪಕ್ಷದ ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ ವೇಣುಗೋಪಾಲ್ ಸೇರಿದಂತೆ ಹಲವರನ್ನ ಭೇಟಿಯಾಗಿ ಚರ್ಚಿಸಿರುವುದಾಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
Key words: Minister, Sathish Jarkiholi, clarifies, HDK, HD Deve Gowda, meet