ಕೊಡಗು,ಏಪ್ರಿಲ್,5,2025 (www.justkannada.in): ಕಾಂಗ್ರೆಸ್ ಶಾಸಕ ಎ.ಎಸ್ ಪೊನ್ನಣ್ಣ ಬಗ್ಗೆ ಅಪಹಾಸ್ಯ ಪೋಸ್ಟ್ ಹಾಕಿದ್ದಕ್ಕೆ ಎಫ್ ಐಆರ್ ದಾಖಲಾದ ಹಿನ್ನೆಲೆಯಲ್ಲಿ ಮನನೊಂದು ನಿನ್ನೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣಾಗಿದ್ದು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಜೆಪಿ ನಾಯಕರು ಸರ್ಕಾರದ ವಿರುದ್ದ ಕೊಡಗಿನಲ್ಲಿ ಬೃಹತ್ ಹೋರಾಟಕ್ಕೆ ಸಜ್ಜಾಗಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರ ಪೇಟೆಯ ಗೋಣಿ ಮಾರೂರು ನಿವಾಸಿ ವಿನಯ್ ಸೋಮಯ್ಯ ನಿನ್ನೆ ಬೆಂಗಳೂರಿನ ನಾಗವಾರದಲ್ಲಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ವಿನಯ್ ಆತ್ಮಹತ್ಯೆ ಪ್ರಕರಣ ಬಿಜೆಪಿಗೆ ಆಡಳಿತ ರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟಕ್ಕೆ ಬಹುದೊಡ್ಡ ಅಸ್ತ್ರವಾಗಿದೆ.
ಈ ಮಧ್ಯೆ ನನ್ನ ತಮ್ಮ ಸಾವಿಗೆ ಕಾಂಗ್ರೆಸ್ ಶಾಸಕ ಪೊನ್ನಣ್ಣ, ಮಂತರ್ ಗೌಡ ಕಾರಣ ಎಂದು ಬೆಂಗಳೂರಿನ ಹೆಣ್ಣೂರು ಪೋಲಿಸ್ ಠಾಣೆಗೆ ವಿನಯ್ ಸಹೋದರ ದೂರು ನೀಡಿದ್ದಾರೆ. ಆದರೆ ಎಫ್ ಐಆರ್ ನಲ್ಲಿ ಶಾಸಕ ಪೊನ್ನಣ್ಣ ಮಂತರ್ ಗೌಡ ಅವರ ಹೆಸರು ಉಲ್ಲೇಖಿಸಿಲ್ಲ ಎಂಬುದು ಬಿಜೆಪಿ ಆರೋಪ. ಈ ನಡುವೆ ವಿನಯ್ ಸೋಮಣ್ಣ ವಿರುದ್ದ ರಾಜಕೀಯ ಪ್ರೇರಿತ ಎಫ್ಐಆರ್ ದಾಖಲಿಸಲಾಗಿದೆ ಎಂದು ಡೆತ್ ನೋಟ್ ನಲ್ಲಿ ಆರೋಪ ಮಾಡಲಾಗಿದ್ದು, ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ಸಿಗಬೇಕು. ಶಾಸಕ ಪೊನ್ನಣ್ಣ ವಿರುದ್ಧ ಎಫ್ ಐಆರ್ ಆಗಬೇಕು ಎಂದು ಇಂದು ಕೊಡಗಿನಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಇಂದು ಕೊಡಗಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್ ಸೇರಿದಂತೆ ಹಲವು ನಾಯಕರ ಭೇಟಿ ನೀಡಲಿದ್ದು, ವಿನಯ್ ಸಾವಿಗೆ ನೇರವಾಗಿ ಸರ್ಕಾರವೇ ಕಾರಣ ಎಂದು ಪ್ರತಿಭಟನೆ ನಡೆಸಲು ಬಿಜೆಪಿ ಮುಂದಾಗಿದೆ.
ಕುಶಾಲನಗರದಲ್ಲಿ ಪ್ರತಿಭಟನೆ ಕಾವು: ಸರಕಾರಿ ಆಸ್ಪತ್ರೆ ಬಳಿ ವಿನಯ್ ಮೃತದೇಹ.
ಇನ್ನು ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಬಿಜೆಪಿ ಹಾಗೂ ಗೌಡ ಸಮಾಜಗಳ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದ ಬಳಿ ಮೃತ ವಿನಯ್ ಮೃತದೇಹ ಇರಿಸಲಾಗಿದೆ. ಇಬ್ಬರು ಶಾಸಕರ ವಿರುದ್ದ ಪ್ರಕರಣ ದಾಖಲಿಸದಿದ್ದರೇ ಶವಸಂಸ್ಕಾರ ನಡೆಸುವುದಿಲ್ಲ ಎಂದು ಬಿಗಿ ಪಟ್ಟು ಹಿಡಿಯಲಾಗಿದೆ.
ಬಿಜೆಪಿ ಬೃಹತ್ ಪ್ರತಿಭಟನೆಗೆ ಸಿದ್ಧತೆ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ ನೇತೃತ್ವದಲ್ಲಿ ಮೈಸೂರು ಎಸ್ ಪಿ ವಿಷ್ಣುವರ್ಧನ್, ಹಾಸನ ಎಸ್ ಪಿ ಸುಜಿತಾ ಸಲ್ಮಾನ್, ಮೈಸೂರು ಕ್ರೈಂ ಡಿಸಿಪಿ ಸುಂದರ ರಾಜ್,
ಹಾಸನ, ಮಂಡ್ಯ ಹೆಚ್ಚುವರಿ ಎಸ್ಪಿ ಒಳಗೊಂಡಂತೆ 400 ಪೊಲೀಸರು, 5 ಕೆಎಸ್ ಆರ್ ಪಿ ತುಕಡಿ, 4 ಜಿಲ್ಲಾ ಪೊಲೀಸ್ ಸಶಸ್ತ್ರ ಪಡೆ ನಿಯೋಜಿಸಲಾಗಿದೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮ ರಾಜನ್ ಮಾಹಿತಿ ನೀಡಿದ್ದಾರೆ.
Key words: Suicide, BJP worker, vinay, BJP, Preparations, protest, Kodagu