ಬೆಂಗಳೂರು,ಏಪ್ರಿಲ್,9,2025 (www.justkannada.in): ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿಗಳಲ್ಲೊಂದಾದ 2024ನೆಯ ಸಾಲಿನ ಅಭಯ ಲಕ್ಷ್ಮಿ ದತ್ತಿ ಪ್ರಶಸ್ತಿಗೆ ಡಾ.ಜಯಮಾಲ ಪೂವಣಿ, ಆರ್.ವೆಂಕಟರಾಜು, ಶಾಂತಲ ಧರ್ಮರಾಜ್, ಆರ್.ರಾಮಚಂದ್ರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅವರು ತಿಳಿಸಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದದ ಜೊತೆಗೆ ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಅಪಾರ ಗೌರವದಿಂದ ಪಿ.ಜಯಲಕ್ಷ್ಮಿ ಅವರು ತಮ್ಮ ಪತಿ ಎಸ್.ಎ.ಅಭಯಕುಮಾರ್ ಅವರ ದಿವ್ಯ ಸ್ಮರಣೆಯಲ್ಲಿ ‘ಅಭಯಲಕ್ಷ್ಮಿ’ ದತ್ತಿ ಪ್ರಶಸ್ತಿಯನ್ನು ಪರಿಷತ್ತಿನಲ್ಲಿ ಸ್ಥಾಪಿಸಿದ್ದಾರೆ. ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರಿಗೆ ಪುರಸ್ಕಾರವನ್ನು ನೀಡ ಬೇಕೆನ್ನುವುದು ದತ್ತಿ ದಾನಿಗಳ ಆಶಯವಾಗಿದೆ ಎಂದು ಡಾ.ಮಹೇಶ್ ಜೋಶಿ ತಿಳಿಸಿದರು.
2024ನೆಯ ಸಾಲಿನ ಈ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಡಾ.ಜಯಮಾಲಾ ಪೂವಣಿಯವರು ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳದವರು, ಸಮಾಜ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊದಲ ಜೈನ ಮಹಿಳೆ ಎಂಬ ಸಾಧನೆ ಮಾಡಿರುವ ಅವರು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಸ್ವಯಂ ನಿವೃತ್ತಿ ಪಡೆದವರು, ಸಾಹಿತ್ಯ, ರಂಗಭೂಮಿ, ಅಧ್ಯಾತ್ಮ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.
ಬೆಂಗಳೂರಿನವರಾದ ಆರ್.ವೆಂಕಟರಾಜು ಹವ್ಯಾಸಿ ರಂಗಭೂಮಿಯ ಪ್ರಮುಖ ನಿರ್ದೇಶಕರ ನಾಟಕಗಳೂ ಸೇರಿದಂತೆ 150ಕ್ಕೂ ಹೆಚ್ಚಿನ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 53 ಚಲನಚಿತ್ರಗಳಲ್ಲಿಯೂ ಅಭಿನಯಿಸಿರುವ ಇವರು ಕಂಠದಾನ ಕಲಾವಿದರಾಗಿಯೂ ಹೆಸರು ಮಾಡಿದ್ದಾರೆ, ಪ್ರಸ್ತುತ ಪಂಪ ಸಾಂಸ್ಕೃತಿಕ ಮತ್ತು ಸಾಮಾಜಿಕ ಕೇಂದ್ರವನ್ನು ಸ್ಥಾಪಿಸಿದ್ದಾರೆ.
ಶಾಂತಲ ಧರ್ಮರಾಜ್ ಮೂರು ದಶಕಗಳಿಂದ ಸಂಯುಕ್ತ ಕರ್ನಾಟಕ ಪತ್ರಿಕಾ ಬಳಗದಲ್ಲಿ ಕ್ರಿಯಾಶೀಲ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಕಳೆದ ಒಂದು ದಶಕಗಳಿಂದ ಕಸ್ತೂರಿ ಮಾಸ ಪತ್ರಿಕೆಯ ಸಂಪಾದಕರಾಗಿದ್ದಾರೆ, ವಿಭಿನ್ನ ಶೈಲಿಯ ವರದಿ-ಲೇಖನಗಳನ್ನು ಅವರ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿಯೂ ನೀಡಿದ್ದು ಪತ್ರಿಕೋದ್ಯಮಕ್ಕೆ ಹೊಸ ರೂಪ ನೀಡಿದ್ದಾರೆ. ಉತ್ತಮ ಬರಹಗಾರ್ತಿ ಕೂಡ ಆಗಿರುವ ಅವರು ಹಲವು ಸಂಘಟನೆಯ ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಬೆಂಗಳೂರಿನ ಆರ್.ರಾಮಚಂದ್ರ ಕರುನಾಡ ರಂಗ ಕಲಾವಿದರ ಒಕ್ಕೂಟದ ಗೌರವಾಧ್ಯಕ್ಷರು, ಪ್ರಚಂಡ ರಾವಣ, ಸತ್ಯ ಹರಿಶ್ಚಂದ್ರ, ಮಹಾಭಾರತ, ಎಚ್ಚಮ ನಾಯಕ ಮೊದಲಾದ ನಾಟಕಗಳಲ್ಲಿ ಅಭಿನಯಿಸಿ ಹೆಸರು ಮಾಡಿದ್ದಾರೆ.
ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ಸೇರಿದ್ದ ಆಯ್ಕೆ ಸಮಿತಿಯು ಪಾರದರ್ಶಕವಾಗಿ ಮತ್ತು ಕೂಲಂಕಶವಾಗಿ ಪರಿಶೀಲಿಸಿ ಡಾ.ಜಯಮಾಲ ಪೂವಣಿ, ಆರ್.ವೆಂಕಟರಾಜು, ಶಾಂತಲ ಧರ್ಮರಾಜ್, ಆರ್.ರಾಮಚಂದ್ರ ಅವರನ್ನು ಆಯ್ಕೆ ಮಾಡಿದೆ ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಡಾ.ಪದ್ಮಿನಿ ನಾಗರಾಜು , ಗೌರವ ಕೋಶಾಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಮತ್ತು ದತ್ತಿದಾನಿಗಳ ಪರವಾಗಿ ಅಭಯಲಕ್ಷ್ಮಿ ಅಭಯಕುಮಾರ್ ಅವರುಗಳು ಭಾಗವಹಿಸಿದ್ದರು.
Key words: Shantala Dharmaraj, Abhayalakshmi Charitable Award, Kannada Sahitya Parisad