ಚಿಕ್ಕಮಗಳೂರು,ಏಪ್ರಿಲ್,10,2025 (www.justkannada.in): ಮಲೆನಾಡು ಭಾಗದಲ್ಲಿ ಮಳೆಯಿಂದ ಅವಾಂತರ ಮುಂದುವರಿದ್ದು, ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಕೆಎಸ್ ಆರ್ ಟಿಸಿ ಬಸ್ 30 ಅಡಿ ಪ್ರಪಾತಕ್ಕೆ ಉರುಳಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಜಯಪುರ ಸಮೀಪದ ಜಲದುರ್ಗಾ ಬಳಿ ನಡೆದಿದೆ.
ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಮನೆಯ ಮೇಲೆ ಬಿದ್ದು ಪ್ರಪಾತಕ್ಕೆ ಉರುಳಿದೆ. ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳುಗಳನ್ನು ಕೊಪ್ಪ ,ಜಯಪುರ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಬಸ್ ನಲ್ಲಿ 60 ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಬಸ್ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂ ಆಗಿದೆ ಬೆಂಗಳೂರು ಡಿಪೋಗೆ ಸೇರಿದ ಕೆಎಸ್ ಆರ್ ಟಿಸಿ ಬಸ್ ಇದಾಗಿದ್ದು, ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Key words: Rain, KSRTC bus, falls, 30 feet, precipice