ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕ ಸಂಪುಟ ಸಭೆ: ವಿಶೇಷ ಪ್ಯಾಕೇಜ್ ಘೋಷಣೆ ನಿರೀಕ್ಷೆ

ಚಾಮರಾಜನಗರ ಏಪ್ರಿಲ್,24,2025 (www.justkannada.in): ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ನಿರೀಕ್ಷೆ ಇದೆ.

ಮಹದೇವಶ್ವರ ಬೆಟ್ಟದ ಜೇನುಮಲೆ ಭವನದ ಮುಂಭಾಗ ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು ಗಡಿ ಜಿಲ್ಲೆ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಸಭೆಯಲ್ಲಿ ನೆರೆಯ ಮೈಸೂರು, ಮಂಡ್ಯ, ಹಾಸನ ಪ್ರದೇಶದ ಪ್ರಗತಿಗೆ ಸಂಬಂಧಿಸಿದ ಯೋಜನೆಗಳು  ಘೋಷಣೆಯಾಗುವ ನಿರೀಕ್ಷೆ ಇದೆ. ಚಾಮರಾಜನಗರ ಮೈಸೂರು ಜಿಲ್ಲೆಯಿಂದ 1997 ರಲ್ಲಿ ಬೇರ್ಪಟ್ಟಿತ್ತು. ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಚಾಮರಾಜನಗರ ಹಿಂದುಳಿದ ಜಿಲ್ಲೆಯಾಗಿದ್ದು, ಜಿಲ್ಲೆಗೆ ಸಂಪುಟ ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ನಿರೀಕ್ಷೆ ಇದೆ.

ಎಸ್.ಎಂ ಕೃಷ್ಣ ಸಿಎಂ ಆಗಿದ್ದ ವೇಳೆ  ವಿಶೇಷ ಸಂಪುಟ ಸಭೆ ಬಿಳಿಗಿರಿ ರಂಗನ ಬೆಟ್ಟದಲ್ಲಿ ನಡೆದಿತ್ತು. ಅದಾದ ಬಳಿಕ ಮಾದಪ್ಪನ ಸನ್ನಿಧಿಯಲ್ಲಿ ಜರುಗುತ್ತಿರುವ ಎರಡನೇ ಸಂಪುಟ ಸಭೆ ಇದಾಗಿದೆ.

ಜಿಲ್ಲೆಯ ಒಳಚರಂಡಿ, ರಸ್ತೆ ಅಭಿವೃದ್ಧಿ, ನೀರಾವರಿ ಯೋಜನೆಗಳು, ಬುಡಕಟ್ಟು ಸಮುದಾಯಗಳ ವಸತಿ,ಹಾಡಿಗಳಿಗೆ ರಸ್ತೆ, ವಿದ್ಯುತ್ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಬೇಕಾಗಿರುವ ಯೋಜನೆಗಳ ಬಗ್ಗೆ   ಜಿಲ್ಲಾಡಳಿತ ಪ್ರಸ್ತಾಪ ಸಲ್ಲಿಸಿದೆ.

ಸಚಿವ ಸಂಪುಟ ಸಭೆಗೆ  ಈಗಾಗಲೇ ಕೆಲ ಸಚಿವರು ರಾತ್ರಿಯೇ ಬಂದು ವಾಸ್ತವ್ಯ ಹೂಡಿದ್ದು  ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ  ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರ ಆಗಮಿಸಲಿದ್ದಾರೆ. ಜನಪ್ರತಿನಿಧಿಗಳ, ಅಧಿಕಾರಿಗಳ ಸ್ವಾಗತಕ್ಕೆ ಮಾದಪ್ಪನ‌ ಬೆಟ್ಟ ಮಧುವಣಗಿತ್ತಿಯಂತೆ  ಕಂಗೊಳಿಸುತ್ತಿದ್ದು, ಮಹದೇಶ್ವರ ಬೆಟ್ಟದಲ್ಲಿ ಭಾರಿ ಪೋಲಿಸ್ ಭದ್ರತೆ ನಿಯೋಜಿಸಲಾಗಿದೆ.

ಮಾದಪ್ಪನ‌ ಚರಿತ್ರೆಯುಳ್ಳ ಮ್ಯೂಸಿಯಂ, ವಜ್ರಮಲೆ ಭವನ, ಸಮಗ್ರ ಒಳಚರಂಡಿ ಯೋಜನೆ, ಸೋಲಾರ್ ಸೌರಶಕ್ತಿ ಘಟಕ, ದೊಡ್ಡಕೆರೆ ಜೀರ್ಣೋದ್ಧಾರ ಕಾಮಗಾರಿ, ಸಿಸಿ ರಸ್ತೆ ಕಾಮಗಾರಿ ಸೇರಿದಂತೆ ಹತ್ತಾರು ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನ ಸಿಎಂ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ.

Key words: Historic, cabinet, meeting, Male Mahadeshwara Hill, today