ಪುಲ್ವಾಮ ಘಟನೆ ಬಳಿಕ ಸ್ವಲ್ಪವೂ ವಿಶ್ರಮಿಸಬಾರದಿತ್ತು: ಉಗ್ರರ ದಾಳಿಗೆ ಇಂಟಲಿಜೆನ್ಸ್ ವೈಫಲ್ಯ ಕಾರಣ-ಸಿಎಂ ಸಿದ್ದರಾಮಯ್ಯ

ಚಾಮರಾಜನಗರ,ಏಪ್ರಿಲ್,24,2025 (www.justkannada.in):  ಈ ಹಿಂದೆ ಪುಲ್ವಾಮ ದಾಳಿಯಲ್ಲಿ 40 ಸೈನಿಕರು ಜೀವ ತೆತ್ತಿದ್ದರು. ಆ ನಂತರ ಸ್ವಲ್ಪವೂ ವಿಶ್ರಮಿಸಬಾರದಿತ್ತು. ಉಗ್ರರ ದಾಳಿಗೆ ಇಂಟಲಿಜೆನ್ಸ್ ವೈಫಲ್ಯ ಕಾರಣ ಅನ್ನಿಸುತ್ತೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಉಗ್ರರು ಎಲ್ಲೇ ಇರಲಿ, ಯಾವುದೇ ರಾಜ್ಯದಲ್ಲಿರಲಿ ಅವರನ್ನ ಮಟ್ಟ ಹಾಕಬೇಕು. ಉಗ್ರ ಚಟುವಟಿಕೆ ಬೆಳೆಯಲು, ನಡೆಸಲು ಕೇಂದ್ರ ಸರ್ಕಾರ ಅವಕಾಶ ಕೊಡಬಾರದು. ಮೊನ್ನೆ ನಡೆದ ಘಟನೆ ಅತ್ಯಂತ ಅಮಾನವೀಯ  ಹೇಯ ಕೃತ್ಯ. ಪುಲ್ವಾಮ ಘಟನೆ ನಡೆದಿತ್ತು, ಈಗ ಇದು ನಡೆದಿದೆ, ಮತ್ತೊಮ್ಮೆ ಈ ರೀತಿ ಘಟನೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಮುನ್ನೆಚ್ಚರಿಕೆ ಬೇರೆ- ಘಟನೆ ನಡೆದ ನಂತರ ತೆಗೆದುಕೊಳ್ಳುವ ಕ್ರಮ ಬೇರೆ ಪುಲ್ವಾಮ ಬಳಿಕ ಸ್ವಲ್ಪವೂ ವಿಶ್ರಮಿಸಬಾರದಿತ್ತು. ಕೇಂದ್ರ ಸರ್ಕಾರದ ಇಂಟಲಿಜೆನ್ಸ್ ವೈಫಲ್ಯ ಇದೆ ಅನ್ಸುತ್ತೆ. ಉಗ್ರರು ಯಾವುದೇ ಜಾತಿ ಧರ್ಮಕ್ಕೆ ಸೇರಿದವರಾಗಲಿ ಅವರನ್ನ ಮಟ್ಟ ಹಾಕಬೇಕು. ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ಸರ್ಕಾರ, ಪಕ್ಷ ಬೆಂಬಲ ನೀಡಲಿದೆ. ಎಲ್ಲರ ಜೊತೆ ನಾವೀದ್ದೇವೆ ಎಂದರು.

ಉಗ್ರರ ದಾಳಿಯಲ್ಲಿ ಮೃತರಾತ ಕನ್ನಡಿಗರ ಕುಟುಂಬಕ್ಕೆ  10 ಲಕ್ಷ ರೂ. ಪರಿಹಾರ ಕೊಟ್ಟಿದ್ದೇವೆ. ಬಹಳ ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: Pahalgam, terrorist attack, Intelligence, failure, CM Siddaramaiah