ಮಂಡ್ಯ ನೂತನ ಕೃಷಿ ವಿವಿ ವಿಧೇಯಕಕ್ಕೆ ಅನುಮೋದನೆ: ರಾಜ್ಯಪಾಲರಿಗೆ ಅಭಿನಂದನೆ

ಬೆಂಗಳೂರು,ಏಪ್ರಿಲ್, 24,2025 (www.justkannada.in):  ಮಂಡ್ಯದಲ್ಲಿ ನೂತನ ಕೃಷಿ ವಿಶ್ವವಿದ್ಯಾಲಯ ವಿಧೇಯಕ ಅನುಮೋದನೆಗೆ ಸಂಬಂಧಿಸಿದಂತೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಂದು ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿದರು.

ಕಳೆದ ಮಾರ್ಚ್ ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ನೂತನ ಮಂಡ್ಯ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ಉಭಯ ಸದನಗಳಲ್ಲಿ ವಿಧೇಯಕವನ್ನು ಅಂಗೀಕರಿಸಿ ರಾಜ್ಯಪಾಲರ ಸಹಮತಿಗೆ ಕಳುಹಿಸಲಾಗಿತ್ತು.

ಮಂಡ್ಯ ಕೃಷಿ ವಿಶ್ವವಿದ್ಯಾಲಯ ವಿಧೇಯಕದ ಬಗ್ಗೆ ಚರ್ಚಿಸಿ ರಾಜ್ಯಪಾಲರಿಗೆ ಸಹಮತಿ ನೀಡುವಂತೆ ಸಚಿವ ಚಲುವರಾಯಸ್ವಾಮಿ ಮನವಿ ಸಲ್ಲಿಸಿದರು. ಮನವಿ ಪುರಸ್ಕರಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ವಿಧೇಯಕಕ್ಕೆ ಸಹಮತಿ ನೀಡಿ ಅನುಮೋದಿಸಿದರು.

ನೂತನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ವಿಧೇಯಕವನ್ನು ಅಂಗೀಕರಿಸಿದ್ದಕ್ಕಾಗಿ ಸಚಿವ ಚಲುವರಾಯಸ್ವಾಮಿ  ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೃಷಿ ಸಚಿವರೊಂದಿಗೆ ವಿಧಾನ ಪರಿಷತ್ ಸದಸ್ಯ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿ ಗೋವಿಂದ ರಾಜು, ಕೃಷಿ ಇಲಾಖೆ ಕಾರ್ಯದರ್ಶಿ ಅನ್ಬುಕುಮಾರ್,  ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಹೆಚ್. ಜಿ.ಪ್ರಭಾಕರ್, ಮಂಡ್ಯ ಕೃಷಿ ವಿಶ್ವ ವಿದ್ಯಾಲಯ ವಿಶೇಷಾಧಿಕಾರಿ ಹರಿಣಿಕುಮಾರ್, ಹಾಗೂ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಎ.ಬಿ.ಪಾಟೀಲ್ ಹಾಜರಿದ್ದರು.

Key words: Mandya, new agricultural university bill, Governor