ಸಂಸದ ಪ್ರತಾಪಸಿಂಹ ಕರ್ನಾಟಕದ ಚಿಲ್ಲರೆ ರಾಜಕಾರಣಿ : ಪ್ರೊ.ಬಿ.ಪಿ.ಮಹೇಶ್ಚಂದ್ರಗುರು ವಾಗ್ದಾಳಿ.

 

ಮೈಸೂರು, ಅ.15, 2019 : ‘ಕೋತಿ ವಂಶಸ್ಥರಿಂದ ನಾವು ಕಲಿಯಬೇಕಿಲ್ಲ. ಇತಿಹಾಸ ಪ್ರಜ್ಞೆಯಿಲ್ಲದ ಅಯೋಗ್ಯರು ಸಂಸತ್‌ನಲ್ಲಿ ಕೂತಿದ್ದಾರೆ. ಇಂಥವರಿಂದ ತುಂಬಿದ ಸಂಸತ್‌ನಿಂದ ನಮಗೆ ನ್ಯಾಯ ಸಿಗುತ್ತಾ?’ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ಚಂದ್ರಗುರು ಸೋಮವಾರ ಸಂಸದ ಪ್ರತಾಪಸಿಂಹ ವಿರುದ್ಧ ಹರಿಹಾಯ್ದರು.

ಮಹಿಷ ಮಂಡಲ ಇಂಟರ್‌ನ್ಯಾಶನಲ್‌ ಬುದ್ಧಿಸ್ಟ್‌ ಕಲ್ಚರಲ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ‘ಪ್ರತಾಪಸಿಂಹ ಕರ್ನಾಟಕದ ಚಿಲ್ಲರೆ ರಾಜಕಾರಣಿ. ಇವರಾಟ ನಡೆಯಲ್ಲ. ಇವರು ಮೂಲಭೂತವಾದಿಗಳಲ್ಲ. ಮೂಲವ್ಯಾದಿಗಳು’ ಎಂದು ಕಿಡಿಕಾರಿದರು.

‘ಶ್ರೀಮಂತರಿಂದ, ಶ್ರೀಮಂತರಿಗಾಗಿ, ಶ್ರೀಮಂತರಿಗೋಸ್ಕರವೇ ಇರುವ ಮೋದಿಯವರ ಶ್ರೀಮಂತ ಸರ್ಕಾರ ನಮಗೆ ಬೇಕಿಲ್ಲ. ಶೋಷಿತರ ಸಮಾಧಿ ಮೇಲೆ ಸ್ಮಾರಕ ನಿರ್ಮಿಸುವ ಮೋದಿಯ ಭಾರತ ನಮಗೆ ಬೇಡ. ಬುದ್ಧ–ಬಸವ–ಗಾಂಧಿ–ಅಂಬೇಡ್ಕರ್ ಭಾರತ ನಮಗೆ ಬೇಕಿದೆ’ ಎಂದು ಕೇಂದ್ರದ ವಿರುದ್ಧವೂ ವಾಗ್ದಾಳಿ ನಡೆಸಿದರು.

‘ಬುದ್ಧ–ಬಸವ–ಗಾಂಧಿ–ಅಂಬೇಡ್ಕರ್ ಕೊಟ್ಟಿದ್ದನ್ನು ಮೋದಿ ಕಿತ್ತುಕೊಳ್ಳುತ್ತಿದ್ದಾರೆ. ಸಮಸ್ತ ಭಾರತೀಯರು ಮೋದಿಯ ಕಡೆ ನೋಡದೆ, ಈ ಮಹಾಪುರುಷರ ಆದರ್ಶಗಳತ್ತ ನೋಡಬೇಕು’ ಎಂದು ಮನವಿ ಮಾಡಿದರು.

ಭೀಮ ರಾಜ್ಯ:

‘ನಮಗೆ ರಾಮ ರಾಜ್ಯ ಬೇಡ. ಭೀಮ ರಾಜ್ಯ ಬೇಕಿದೆ. ಗಾಂಧಿ ದೇಶವನ್ನು ದಾಸ್ಯದಿಂದ ವಿಮೋಚನೆಗೊಳಿಸಿದರಷ್ಟೇ. ಆದರೆ, ನಮ್ಮನ್ನು ಬ್ರಾಹ್ಮಣರಿಂದ ವಿಮೋಚನೆಗೊಳಿಸಲಿಲ್ಲ. ಇದಕ್ಕಾಗಿಯೇ ನಾನು ಗಾಂಧಿ ವಿರೋಧಿಸುವೆ’ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.
‘ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯ ಸುಳ್ಳು ಸಂಘ. ಇದು ಯುವಕರ ತಲೆಯಲ್ಲಿ ಅಜ್ಞಾನ ತುಂಬುವ ಕೆಲಸ ಮಾಡುತ್ತಿದೆ. ದೇವಸ್ಥಾನ, ಪಂಚಾಂಗ, ಚಾತುರ್ವರ್ಣ ಪ್ರತಿನಿಧಿಸುವ ದೇವರನ್ನು ತಿರಸ್ಕರಿಸಿ. ಯಜ್ಞ–ಯಾಗದಲ್ಲಿ ದ್ವೇಷ ತುಂಬಿದೆ. ಪ್ರಸ್ತುತ ಶಾಲಾ–ಕಾಲೇಜು ಪಠ್ಯ ಪುಸ್ತಕಗಳು ಸುಳ್ಳಿನ ಕಂತೆಗಳಾಗಿವೆ’ ಎಂದು ಅವರು ಹೇಳಿದರು.

ನಾಯಕತ್ವದ ಪೂಜೆ:

‘ದೇಶದಲ್ಲಿ ಭಾವನಾತ್ಮಕತೆಯಿಂದ ರಾಷ್ಟ್ರೀಯತೆಯ ಮಂಕುಬೂದಿ ಎರಚುವಿಕೆ ನಡೆದಿದೆ. ಇದು ಅಪಾಯಕಾರಿ ಬೆಳವಣಿಗೆ’ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ತಿಳಿಸಿದರು.
ದೇಶದ ಬಹುಸಂಖ್ಯಾತರು ಒಟ್ಟಾಗಿ ಎದ್ದು ನಿಂತರೆ ಹೇಳ ಹೆಸರಿಲ್ಲದಂತೆ ದೂಳೀಪಟವಾಗುವ ಭಯದಿಂದ, ಅಂಬೇಡ್ಕರ್‌ ವಿರೋಧಿಸಲಾಗದೆ ಸಂವಿಧಾನ ಬದಲಾವಣೆ, ಮೀಸಲಾತಿ, ಮತಾಂತರ ವಿರೋಧಿಸುವುದು ನಡೆದಿದೆ. ನಾಯಕತ್ವದ ಪೂಜೆ ಪರಾಕಾಷ್ಠೆ ತಲುಪಿದೆ. ಇದರ
ಪರಿಣಾಮ ಸ್ವತಂತ್ರ ಅಸ್ತಿತ್ವದ ಸಂಸ್ಥೆಗಳು ಸಹ ಇದೀಗ ಯಾವ ರೀತಿ ಕಾರ್ಯ ನಿರ್ವಹಿಸುತ್ತಿವೆ ಎಂಬುದು ಜಗಜ್ಜಾಹೀರುಗೊಂಡಿದೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೃಪೆ : ಪ್ರಜಾವಾಣಿ ವಾರ್ತೆ

 

key words : ambedkar-mysore-maheshchandraguru-dalith-mahisha