ಉದ್ಯೋಗಿಯಾಗುವುದಕ್ಕಿಂತ ಉದ್ಯೋಗದಾತರಾಗಿ : ಯುವಕರಿಗೆ ಕವಿಮಾತು ಹೇಳಿದ ಐಐಎಸ್ಸಿ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಕೆ.ಜೆ.ರಾವ್.

ಮೈಸೂರು, ಅ.15, 2019 🙁 www.justkannada.in news ) ಉದ್ಯೋಗ ಪಡೆಯುವುದಕ್ಕಿಂತ, ಉದ್ಯೋಗ ಸೃಷ್ಟಿಗೆ ಯುವಕರು ಆದ್ಯತೆ ನೀಡಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಕೆ.ಜೆ.ರಾವ್ ಕರೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಸ್ಕಿಲ್ ಆನ್ ವ್ಹೀಲ್ಸ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ಹೇಳಿದಿಷ್ಟು…

ವ್ಯಾಸಂಗದ ಬಳಿಕ ಯುವಕರು ಉದ್ಯಮಗಳನ್ನು ಆರಂಭಿಸಬೇಕು. ಇದರಿಂದ ದೇಶ ಆರ್ಥಿಕವಾಗಿ ಬಲಗೊಳ್ಳುತ್ತದೆ. ಆಗ ಮಾತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಗೌರವ ಸಿಗಲು ಸಾಧ್ಯ. ಜಪಾನೀಯರಲ್ಲಿರುವ ಕಷ್ಟಸಹಿಷ್ಣು, ಸೃಜನಶೀಲ ಗುಣ ಭಾರತೀಯರಿಗೂ ಬೇಕಿದೆ‌. ಕೆಲ ದಿನಗಳ ಹಿಂದೆಯಷ್ಟೆ ಚಂಡಮಾರುತ, ಭೂಕಂಪ, ಪ್ರವಾಹಕ್ಕೆ ಸಿಲುಕಿ ಜಪಾನ್‌ ತತ್ತರಿಸಿರಬಹುದು. ನಿಜ ಆದರೆ, ಆ ದೇಶದಲ್ಲಿರುವ ಎಂಜಿನಿಯರ್ ಗಳ ಇಚ್ಛಾಶಕ್ತಿಯಿಂದ ಮುಂದಿನ ಒಂದೆರೆಡು ತಿಂಗಳಲ್ಲಿ ಆ ದೇಶವನ್ನು ಮೊದಲಿನಂತೆ ನಿರ್ಮಿಸಬಲ್ಲರು. ಜಪಾನೀಯರಂತೆ ಭಾರತದಲ್ಲಿ ಸೃಜನಶೀಲ, ಬುದ್ಧಿವಂತ‌ ಯುವ ಜನರಿದ್ದಾರೆ. ಅವರು ಮನಸು ಮಾಡಿದಲ್ಲಿ ಬೇರೆಲ್ಲ ದೇಶಗಳನ್ನು ಹಿಂದಿಕ್ಕಬಲ್ಲ ಶಕ್ತಿ ಇವರಿಗಿದೆ. ದೇಶ ಕಟ್ಟುವ ಸಂಕಲ್ಪವಷ್ಟೇ ಬೇಕಿದೆ.
ಇಂದು ವೃತ್ತಿ ಕೌಶಲ್ಯ ಎನ್ನುವುದು ಅನಿವಾರ್ಯತೆಗಳಲ್ಲಿ ಒಂದು. ಸುಮಾರು 25 ರಿಂದ 40 ವರ್ಷದೊಳಗಿನ ಮಂದಿ ಉದ್ಯೋಗ ಸಮಸ್ಯೆಯಿಂದ ಬಳಲುವುದಕ್ಕೆ ಕೌಶಲ್ಯ ಕೊರತೆಯೇ ಕಾರಣ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂದರ್ಶಕ ಪ್ರಾಧ್ಯಾಪಕ ಕೆ.ಜೆ.ರಾವ್ ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಭಾಗವಹಿಸಿದ್ದ ಮೈಸೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ..ಜಿ.ಹೇಮಂತ್‌ಕುಮಾರ್ ಮಾತನಾಡಿ ಹೇಳಿದಿಷ್ಟು….

ಕೇವಲ ಪದವಿಯೊಂದರಿಂದಲೇ ಉತ್ತಮ ಭವಿಷ್ಯ ಪಡೆದುಕೊಳ್ಳಲು ಸಾಧ್ಯವಿಲ್ಲ. ಇದರ ಜತೆಗೆ ವೃತ್ತಿ ಕೌಶಲ್ಯವೂ ಅಗತ್ಯ. ಮೈಸೂರು ವಿಶ್ವವಿದ್ಯಾನಿಲಯ ವ್ಯಾಪ್ತಿಗೆ ಸೇರ್ಪಡೆಗೊಳ್ಳುವ ನಾಲ್ಕು ಜಿಲ್ಲೆಗಳಲ್ಲಿನ 240 ಕಾಲೇಜುಗಳ ಮೂಲಕ 1.30 ಲಕ್ಷ ವಿದ್ಯಾರ್ಥಿಗಳು ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಇವರೆಲ್ಲಾ ಕೇವಲ ಪದವಿ ಪಡೆಯುತ್ತಿದ್ದಾರೆಯೇ ವಿನಾಃ ವೃತ್ತಿ ಕೌಶಲ್ಯ ಹೊಂದುತ್ತಿಲ್ಲ. ಈ ಕೊರತೆ ಕಾರಣ ಉದ್ಯೋಗಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲ್ಯ ಮೂಡಿಸಬೇಕು ಎನ್ನುವ ಸಲುವಾಗಿ ಕೌಶಲ್ಯ ತರಬೇತಿ ಕೇಂದ್ರ ಆರಂಭಿಸಿದೆ.

ಸಮಾರಂಭದಲ್ಲಿ ಉದ್ಯಮಿ ಡಿ.ಸುಧನ್ವ, ಪ್ರೊ. ಆಯಿಶಾ , ಪ್ರೊ..ಎಸ್.ಜೆ.ಮಂಜುನಾಥ್, ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.

key words : mysore-university-skill-development-uom-k.j.rao-hemanth.kumar-vc

—-