ಉದ್ಧಟತನದಿಂದ ವರ್ತಿಸಿದ್ದ ಮೈಸೂರಿನ ‘ಶರವಣ ಭವನ’ ಹೋಟೆಲ್ ಮಾಲೀಕನಿಗೆ ಕನ್ನಡಿಗರ ತಾಖತ್ತಿನ ದರ್ಶನ…

 

ಮೈಸೂರು, ಮೇ 15, 2019 (www.justkannada.in news) : ಕನ್ನಡ ನಾಮಫಲಕ ಯಾಕೆ ಪ್ರದರ್ಶಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ್ದು ಅಲ್ಲದೆ ತಾಖತ್ತಿದ್ರೆ ನಾಮಫಲಕ ಬದಲಿಸು ಎಂದು ಸವಾಲೆಸಿದ್ದ ಕನ್ನಡೇತರ ಹೋಟೆಲ್ ಮಾಲೀಕನಿಗೆ ಕನ್ನಡ ಪರ ಸಂಘಟನೆ ಸದಸ್ಯರು ಸರಿಯಾಗಿಯೇ ‘ ಕ್ಲಾಸ್ ‘ ತೆಗೆದುಕೊಂಡ ಘಟನೆ ನಡೆದಿದೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ವಿಶ್ವ ಪ್ರಸಿದ್ಧ ಮೃಗಾಲಯದ ಸಮೀಪವಿರುವ ‘ಶರವಣ ಭವನ’ದ ಮಾಲೀಕನೆ ತಪ್ಪು ತಿದ್ದುಕೊಂಡು ಹಿಂದಿ ನಾಮಫಲಕ ತೆರವುಗೊಳಿಸಿ ಕ್ಷಮೆ ಕೇಳಿದಾತ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಗಾಂಧಿಗಿರಿ ಮೂಲಕವೇ ಪಾಠ ಕಲಿಸಿದ ಕನ್ನಡ ಪರ ಸಂಘಟನೆ ಸದಸ್ಯರ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಏನಿದು ಘಟನೆ :

ಮೃಗಾಲಯ ಸಮೀಪ ಶರವಣ ಭವನದಲ್ಲಿ ನಾಮಫಲಕ ಸಂಪೂರ್ಣ ಹಿಂದಿಮಯವಾಗಿ ಕನ್ನಡ ನಾಪತ್ತೆಯಾಗಿತ್ತು. ಈ ಬಗ್ಗೆ ಪ್ರವಾಸಿ ಕನ್ನಡಿಗರೊಬ್ಬರು ಪ್ರಶ್ನಿಸಿದ್ದರು. ಆಗ ಅದಕ್ಕೆ ಉಡಾಫೆಯಿಂದ ಉತ್ತರಿಸಿದ್ದ ಹೋಟೆಲ್ ಮಾಲೀಕ, ಕನ್ನಡ ನಾಮಫಲಕ ಹಾಕಲ್ಲ. ತಾಖತ್ತಿದ್ರೆ ಹಿಂದಿ ಬೋರ್ಡ್ ತೆಗೆಸು ನೋಡುವಾ.. ಎಂದು ಸವಾಲು ಹಾಕಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿತ್ತು.

ಇದನ್ನು ಗಮನಿಸಿದ ಕನ್ನಡ ಪರ ಸಂಘಟನೆ ಸದಸ್ಯರು, ಇದನ್ನು ಗಂಭೀರವಾಗಿ ಪರಿಗಣಿಸಿ ಇಂದು ಹೋಟೆಲ್ ಗೆ ತೆರಳಿ ಉಡಾಫೆಯಿಂದ ಮಾತನಾಡಿದ್ದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡರು. ಕಡೆಗೆ ತನ್ನ ತಪ್ಪಿನ ಅರಿವಾದ ಹೋಟೆಲ್ ಮಾಲೀಕ, ಹಿಂದಿ ನಾಮಫಲಕವನ್ನು ಖುದ್ದು ತಾನೆ ಹರಿದು ಹಾಕಿ, ಶೀಘ್ರದಲ್ಲಿಯೇ ಕನ್ನಡ ನಾಮಫಲಕ ಹಾಕುವೆ ಎಂದು ಮನವಿ ಮಾಡಿಕೊಂಡ. ಜತೆಗೆ ತನ್ನ ಉದ್ಧಟತನಕ್ಕೆ ಕನ್ನಡ ಪರ ಸಂಘಟನೆಗಳ ಸದಸ್ಯರಿಗೆ ಕೈ ಮುಗಿದು ಕ್ಷಮೆ ಕೋರಿದ.

ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು. ಅನ್ಯ ರಾಜ್ಯದಿಂದ ಹೊಟ್ಟೆ ಪಾಡಿಗೋಸ್ಕರ ಬಂದು ಇಲ್ಲಿ ಜೀವಿಸುತ್ತಿದ್ದಿರ. ಇದಕ್ಕೆ ಯಾರದ್ದು ಆಕ್ಷೇಪವಿಲ್ಲ. ಆದರೆ ಈ ನಾಡಿನ ನೆಲ, ಜಲ, ಭಾಷೆಯ ವಿಷಯ ಬಂದಾಗ ಗೌರವಿಸುವುದನ್ನು ಕಲಿಯಬೇಕು ಎಂದು ಆತನಿಗೆ ಕಿವಿಮಾತು ಹೇಳಿದರು.

key words : kannada-mysore-nameboard-zoo-sharavana-bhavana