ಬೆಂಗಳೂರು, ಅ.23, 2019 : (www.justkannada.in news ) ಕನ್ನಡ ಚಿತ್ರರಂಗದಲ್ಲಿ ಈಗ ಪ್ರಯೋಗಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಕಿರುಚಿತ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ತನ್ನ ಭಿನ್ನ ಕಥಾಹಂದರ, ನಿರೂಪಣಾ ಶೈಲಿಯ ಮೂಲಕ ಕನ್ನಡದ ಕಿರುಚಿತ್ರ ‘ದಿ ಬೆಸ್ಟ್ ಆ್ಯಕ್ಟರ್’ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಚಿತ್ರದ ಕೀರ್ತಿ ದಿನೇ ದಿನೇ ಹೆಚ್ಚುತ್ತಿದ್ದು ಈಗ ಮತ್ತೊಂದು ಸಂತಸದ ಸುದ್ದಿ ಎದುರಾಗಿದೆ.
ನಾಗರಾಜ್ ಸೋಮಯಾಜಿ ನಿರ್ದೇಶನ ಮತ್ತು ಚಿತ್ರಕಥೆ ಹೊಂದಿರುವ ಈ ಚಿತ್ರವು ದಿನೇಶ್ ವೈದ್ಯ ಅಂಪರು ಮತ್ತು ಸರ್ವಸ್ವ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿದೆ. ಈಗ ಚಿತ್ರವು ಅಮೆರಿಕನ್ ಗೋಲ್ಡನ್ ಪಿಕ್ಚರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ನಾಮನಿರ್ದೇಶನಗೊಂಡಿದೆ.
ಈ ಬಗ್ಗೆ ಚಿತ್ರೋತ್ಸವ ಸಂಸ್ಥೆಯು ಸರ್ವಸ್ವ ನಿರ್ಮಾಣ ಸಂಸ್ಥೆಗೆ ಪತ್ರ ಬರೆದು ಅಕ್ಟೋಬರ್ 2019ರ ಈ ಚಿತ್ರೋತ್ಸವಕ್ಕೆ ಆಯ್ಕೆಗೊಂಡಿರುವ ಬಗ್ಗೆ ಮಾಹಿತಿ ತಿಳಿಸಿದೆ. ಇದು ಚಿತ್ರಕ್ಕೆ ಮತ್ತೊಂದು ಸುವರ್ಣಗರಿಯನ್ನು ಮೂಡಿಸಿದೆ.
ಉತ್ತಮ ಕಥಾಹಂದರದ ಮೂಲಕ ಗಮನ ಸೆಳೆದಿರುವ ಚಿತ್ರವು ಕೆಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ದೆಹಲಿಯಲ್ಲಿ ನಡೆದ 10 ನೇ ದಾದಾ ಪಾಲ್ಕೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಚಿತ್ರದಲ್ಲಿನ ಎಸ್.ಕೆ ರಾವ್ ಅವರ ಛಾಯಾಗ್ರಹಣಕ್ಕೆ ಪ್ರತಿಷ್ಠಿತ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯು ಚಿತ್ರಕ್ಕೆ ಮತ್ತೊಂದು ಗರಿ ಮೂಡಿಸಿದೆ. ಅಲ್ಲದೆ ಕೋಲ್ಕತ್ತದಲ್ಲಿ ನಡೆದ ಎನ್ ಇಜೆಡ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯು ಲಭಿಸಿದೆ. ಕಳೆದ ಜುಲೈನಲ್ಲಿ ಈ ಕಿರುಚಿತ್ರವು ಬೆಂಗಳೂರಿನ ಬನಶಂಕರಿಯ ಸುಚಿತ್ರ ಚಿತ್ರಮಂದಿರದಲ್ಲಿ ಪ್ರೇಕ್ಷಕರಿಗಾಗಿ ಪ್ರದರ್ಶನವಾಗಿತ್ತು.
ಚಿತ್ರದಲ್ಲಿ ‘ಕಟಕ’ ಚಿತ್ರದ ಪೋಷಕ ಪಾತ್ರದಲ್ಲಿ ಗಮನ ಸೆಳೆದಿದ್ದ ಮಾಧವ ಕಾರ್ಕಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇವರ ನಟನೆ ಸ್ವಾಭಾವಿಕವಾಗಿದ್ದು ಚಿತ್ರದ ಯಶಸ್ಸಿಗೆ ಪೂರಕವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ.
ಚಿತ್ರಕ್ಕೆ ಶ್ರೀಧರ್ ಬನವಾಸಿಯವರು ಕಥೆ ಬರೆದಿದ್ದು ಭಾಸ್ಕರ್ ಬಂಜೆರಾ ಅವರ ಸಂಭಾಷಣೆಯಿದೆ. ಅರ್ಜುನ್ ರಾಮು ಅವರ ಹಿನ್ನಲೆ ಸಂಗೀತ ಮತ್ತು ಬಿ.ಎಸ್ ಸಂಕೇತ್ ಅವರ ಸಂಕಲನ ಚಿತ್ರಕ್ಕಿದೆ. ಚಿತ್ರವು ಸಂಪೂರ್ಣ ನುರಿತ ತಂತ್ರಜ್ಞರಿಂದ ತಯಾರಾಗಿದೆ.
ದಾದಾಸಾಹೇಬ್ ಪಾಲ್ಕೆ ವಿಜೇತ ಚಿತ್ರವು ಇತರ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದೆ. ರೋಮ್ ಇಂಡಿಪೆಂಡೆಂಟ್ ಪ್ರಿಸ್ಮಾ ಅವಾರ್ಡ್, ಆರ್ಫ್ ಬರ್ಲಿನ್ ಇಂಟರ್ ನ್ಯಾಷನಲ್ ಅವಾರ್ಡ್ ಚಿತ್ರಕ್ಕೆ ಲಭಿಸಿದೆ.
ದಿ ಬೆಸ್ಟ್ ಆ್ಯಕ್ಟರ್ ಕಿರುಚಿತ್ರ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಬೆಳಗಾವಿಯ ಮೂವಿಂಗ್ ಪಿಕ್ಚರ್ಸ್ ಫೆಸ್ಟಿವಲ್, ಕೋಲ್ಕತ್ತದಲ್ಲಿ ನಡೆದ ಎನ್ ಇಜೆಡ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್, ಜೋಧಪುರದ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮತ್ತು ಲಂಡನ್ನಿನ ಇಂಟರ್ ನ್ಯಾಷನಲ್ ಫಿಲ್ಮ್ ಮೇಕರ್ ಫೆಸ್ಟಿವಲ್ ಗಳಲ್ಲಿ ಪ್ರದರ್ಶನಗೊಂಡು ಸೈ ಎನಿಸಿಕೊಂಡಿದೆ.
ಈಗ ಈ ಸಾಲಿಗೆ ಅಮೆರಿಕನ್ ಗೋಲ್ಡನ್ ಪಿಕ್ಚರ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಸಹ ಸೇರಿಕೊಂಡಿದೆ.
ನಾಗರಾಜ್ ಸೋಮಯಾಜಿಯವರ ದಿ ಬೆಸ್ಟ್ ಆ್ಯಕ್ಟರ್ ಚಿತ್ರತಂಡವೇ ಪುಕ್ಸಟ್ಟೆ ಲೈಫು ಎಂಬ ವಿಭಿನ್ನ ಶೀರ್ಷಿಕೆಯ ಕಥೆಯನ್ನು ಹೊತ್ತು ತರುತ್ತಿದೆ. ಚಿತ್ರೀಕರಣವು ಈಗ ಮುಕ್ತಾಯವಾಗಿದ್ದು ಎಲ್ಲ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಪ್ರಾರಂಭದಲ್ಲಿ ಸಂಕ್ರಾಂತಿಯ ವೇಳೆಗೆ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಯೋಜಿಸಿದೆ.
key words : bangalore-film-kannada-the.best.actor-award