ಅಂತಿಮ ಯುದ್ಧಕ್ಕೆ ಬಿಜೆಪಿ ಸಿದ್ಧ!

ಬೆಂಗಳೂರು:ಮೇ-17:ಮುಖ್ಯಮಂತ್ರಿ ಸೇರಿ ಮೈತ್ರಿ ಪಕ್ಷಗಳ ಮುಂಚೂಣಿ ನಾಯಕರೇ ಪರಸ್ಪರರ ವಿರುದ್ಧ ವಾಗ್ದಾಳಿಯಲ್ಲಿ ನಿರತವಾಗಿ ಸರ್ಕಾರ ಅಸ್ಥಿರತೆಯತ್ತ ಸಾಗತ್ತಿರುವ ಮುನ್ಸೂಚನೆ ನಡುವೆ ರಾಜ್ಯ ಬಿಜೆಪಿ ಮೇ 21ಕ್ಕೆ ಬೆಂಗಳೂರಿನಲ್ಲಿ ಕರೆದಿರುವ ಸಭೆ ಕುತೂಹಲ ಮೂಡಿಸಿದೆ.

ಮೇ 23ಕ್ಕೆ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಮೈತ್ರಿ ಸರ್ಕಾರದ ಪತನಕ್ಕೆ ನಾಂದಿಯಾಗುತ್ತದೆ, ಆಗ ನಾವು ಸರ್ಕಾರ ರಚಿಸುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಈ ಸಭೆ ಪೂರ್ವ ಸಿದ್ಧತೆ ಎನ್ನಲಾಗುತ್ತಿದೆ. ಜನವರಿಯಲ್ಲಿ ನವದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ನಂತರ ಗುರುಗ್ರಾಮದ ರೆಸಾರ್ಟ್ ವಾಸಕ್ಕೆ ತೆರಳಿದಂತೆ ಈ ಬಾರಿಯೂ ಆಗಬಹುದು ಎಂಬ ಮಾತು ಕೇಳಿಬರುತ್ತಿವೆ.

ಬರದ ಹೆಸರಲ್ಲಿ ಸಭೆ: ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದು, ಅದರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎನ್ನುವುದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪ. ಕಳೆದ ವಾರವೇ ಎಲ್ಲ ಬಿಜೆಪಿ ಶಾಸಕರಿಗೆ ತಂತಮ್ಮ ಪ್ರದೇಶಗಳಲ್ಲಿನ ಬರ ಪರಿಸ್ಥಿತಿ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ಚರ್ಚೆ ನಡೆಸಿ ಬರ ಪರಿಸ್ಥಿತಿ ಅವಲೋಕಿಸಲು ಮೇ 21ಕ್ಕೆ ಸಭೆಗೆ ಆಗಮಿಸುವಂತೆ ಎಲ್ಲ ಶಾಸಕರು, ಸಂಸದರಿಗೆ ಬಿಎಸ್​ವೈ ತಿಳಿಸಿದ್ದಾರೆ. ವಿಶೇಷವೆಂದರೆ, ಬರದ ಕುರಿತು ವರದಿ ನೀಡುವ ಸೂಚನೆ ಹಾಗೂ ಮೇ 21ರ ಸಭೆಯ ಸೂಚನೆಗಳೆಲ್ಲವೂ ಮೌಖಿಕವಾಗಿಯೇ ಇವೆ. 21ರ ನಂತರ ಒಂದೇ ದಿನ ಅಂತರದಲ್ಲಿ ಲೋಕಸಭೆ ಮತ್ತು ಉಪಚುನಾವಣೆ ಫಲಿತಾಂಶ ಹೊರಬೀಳುತ್ತದೆ. ಬರ ಪರಿಸ್ಥಿತಿ ಚರ್ಚೆ, ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಇದು ಸಮಯವಲ್ಲ. ನೇರವಾಗಿ ರಾಜಕೀಯಕ್ಕೆ ಸಂಬಂಧಿಸಿದ ಸಭೆಯೇ ಇರುತ್ತದೆ ಎಂದು ಉತ್ತರ ಕರ್ನಾಟಕದ ಬಿಜೆಪಿ ಶಾಸಕರೊಬ್ಬರು ಸ್ಪಷ್ಟ ಅಭಿಪ್ರಾಯಪಟ್ಟಿದ್ದಾರೆ.

ಯೋಗೇಶ್ವರ್ ಭೇಟಿ ಕುತೂಹಲ

ಸರ್ಕಾರ ರಚನೆ ಕಸರತ್ತಿನಲ್ಲಿ ಯಡಿಯೂರಪ್ಪ ಜತೆಗೇ ಇದ್ದಾರೆ ಎನ್ನಲಾಗುತ್ತಿರುವ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಮಂಗಳವಾರ ಬೆಂಗಳೂರಿನಲ್ಲಿ ಕಾಂಗ್ರೆಸ್​ನ ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದು, ಮೇ 21ರ ಸಭೆ ಕುರಿತ ಕುತೂಹಲ ಹೆಚ್ಚಿಸಿದೆ. ನಂತರದಲ್ಲಿ ನೆಲಮಂಗಲ ಬಿಜೆಪಿ ಮುಖಂಡ ನಾಗರಾಜ್ ಸಹ ಜಾರಕಿಹೊಳಿ ಭೇಟಿಯಾಗಿದ್ದಾರೆ. ಮೇ 23ರ ನಂತರದ ಬೆಳವಣಿಗೆಗಳಲ್ಲಿ, ಹೊರಗಿನಿಂದ ಬೇಕಾದ ಶಕ್ತಿಯನ್ನು ಹೊಂದಿಸಿಕೊಳ್ಳುವುದು ಈ ಭೇಟಿಗಳ ಉದ್ದೇಶ ಇರಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ವಿಶ್ವಾಸಕ್ಕೆ ಪಡೆಯುವ ಯತ್ನ?

ಮೈತ್ರಿ ಪಕ್ಷಗಳ ಮುಂಚೂಣಿ ನಾಯಕರಲ್ಲಿ ಉಂಟಾಗಿರುವ ಗೊಂದಲ ನೋಡಿದರೆ ಮೇ 23ರ ನಂತರ ಈ ಸರ್ಕಾರ ಉಳಿಯುತ್ತದೆ ಎಂಬುದರಲ್ಲಿ ಯಾವುದೇ ನಂಬಿಕೆ ಇಲ್ಲ ಎಂಬುದು ರಾಜ್ಯ ಬಿಜೆಪಿ ನಾಯಕರೊಬ್ಬರ ಅಭಿಪ್ರಾಯ. ಅಂಥ ಸಮಯ ಎದುರಾದಾಗ ರಾಜ್ಯ ಬಿಜೆಪಿಯಲ್ಲಿ ಯಾವುದೇ ರೀತಿಯ ನಾಯಕತ್ವ ಗೊಂದಲ ಉಂಟಾಗಬಾರದು ಎಂಬುದು ಯಡಿಯೂರಪ್ಪ ಚಿಂತನೆ. ಲೋಕಸಭಾ ಚುನಾವಣೆ ನಂತರ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷದಲ್ಲಿ ಯಾವ ಬದಲಾವಣೆಗಳು ಬೇಕಾದರೂ ಆಗುವ ಸಾಧ್ಯತೆಯಿದೆ. ಫಲಿತಾಂಶಕ್ಕೂ ಮೊದಲು ರಾಜ್ಯದ ಎಲ್ಲ ಶಾಸಕರು ಹಾಗೂ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಈಗಿನ ಅವಶ್ಯಕತೆ. ಸರ್ಕಾರ ರಚನೆ ನಿಟ್ಟಿನಲ್ಲಿ ಯಡಿಯೂರಪ್ಪ ಅವರಿಗೇ ಸಂಪೂರ್ಣ ಹೊಣೆ ನೀಡಿ, ಅವರು ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂಬ ಒಂದು ವಾಕ್ಯದ ನಿರ್ಣಯ ಅಂಗೀಕರಿಸುವ ಸಾಧ್ಯತೆಯೂ ಇದೆ. ಬಿಜೆಪಿಯ ಕೆಲ ಶಾಸಕರು ಹೊರ ಬರಲಿದ್ದಾರೆ ಎಂಬ ಕಾಂಗ್ರೆಸ್-ಜೆಡಿಎಸ್ ನಾಯಕರ ಮಾತುಗಳು ವಾಸ್ತವವೋ ಅಥವಾ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೋ ಎಂಬುದೂ ಇದರಿಂದ ಸಾಬೀತಾಗುತ್ತದೆ. ಹೊರಗಿನ ಸಂಖ್ಯೆ ಕ್ರೋಢೀಕರಿಸುವ ಮುನ್ನ ನಮ್ಮಲ್ಲಿರುವ ಒಗ್ಗಟ್ಟನ್ನು ತೋರಿಸುವ ಸಾಂಕೇತಿಕತೆಯೂ ಈ ಸಭೆಯ ಹಿಂದಿದೆ ಎಂದು ನಾಯಕರೊಬ್ಬರು ತಿಳಿಸಿದ್ದಾರೆ.
ಕೃಪೆ:ವಿಜಯವಾಣಿ
bjp-ready-for-final-battle