ಬೆಂಗಳೂರು,ನ,3,2019(www.justkannada.in): ಮೈತ್ರಿ ಸರ್ಕಾರದ ವೇಳೆ ಅನುದಾನ ಕೊಡಿಸಲು ಆಗಲಿಲ್ಲ. ಹೆಚ್.ಡಿ ಕುಮಾರಸ್ವಾಮಿಯಿಂದ ನನ್ನ ಕೆಲಸ ಆಗ್ತಿಲ್ಲ. ಹೆಚ್,ಡಿಕೆ ನನ್ನ ಮಾತು ಕೇಳುತ್ತಿಲ್ಲ ಎಂದು ಸಿದ್ದರಾಮಯ್ಯ ಅವರೇ ಮೈತ್ರಿ ಸರ್ಕಾರವಿದ್ದ ಸಮಯದಲ್ಲಿ ನನ್ನ ಬಳಿಯೇ ಹೇಳಿದ್ದರು. ಈ ಬಗ್ಗೆ ಮಾತನಾಡಲು ಮಾಧ್ಯಮದ ಮುಂದೆ ಬರಲಿ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜು ಸವಾಲು ಹಾಕಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್, ನಮ್ಮ ಕೆಲಸವನ್ನೇ ಕುಮಾರಸ್ವಾಮಿ ಮಾಡಿಕೊಡುತ್ತಿಲ್ಲ. ನಾನು ವರ್ಗಾವಣೆ ಮಾಡುವಂತೆ ಹೇಳಿದ್ದೆ. ಆದ್ರೆ ಆ ಕೆಲಸವನ್ನ ಮಾಡಲಿಲ್ಲ. ಹೆಚ್.ಡಿಕೆ ನನ್ನ ಕೆಲಸವನ್ನ ಮಾಡುತ್ತಿಲ್ಲ ಎಂದು ಸಿದ್ಧರಾಮಯ್ಯ ಅವರೇ ನನ್ನ ಬಳಿ ಮೂರು ಬಾರಿ ಹೇಳಿದ್ದರು. ಸಿದ್ದರಾಮಯ್ಯ ಅವರ ಕೆಲಸಗಳನ್ನೆ ಮಾಡಿಕೊಡುತ್ತಿಲ್ಲ ಅಂದಮೇಲೆ ನಮ್ಮ ಕೆಲಸ ಎಲ್ಲಿ ಮಾಡಿಕೊಡುತ್ತಾರೆ ಎಂದು ನಾವು ರಾಜೀನಾಮೆ ನೀಡಿದವು ಎಂದು ಹೇಳಿದರು.
ದೇಶದಲ್ಲಿ ಸುಭದ್ರ ಆಡಳಿತ ಕೊಡಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ…
ಇದೇ ವೇಳೆ ಪ್ರಧಾನಿ ಮೋದಿ ಪರ ಬ್ಯಾಟ್ ಬೀಸಿ ಕಾಂಗ್ರೆಸ್ ವಿರುದ್ದ ಹರಿಹಾಯ್ದ ಎಂಟಿಬಿ ನಾಗರಾಜ್, ದೇಶದಲ್ಲಿ ಸುಭದ್ರ ಆಡಳಿತ ಕೊಡಲು ಪ್ರಧಾನಿ ಮೋದಿಯಿಂದ ಮಾತ್ರ ಸಾಧ್ಯ. ಮೋದಿ ವಿರುದ್ದ ಯಾವುದೇ ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷಗಳು ನಿಲ್ಲಲು ಆಗಲ್ಲ. ಕಾಂಗ್ರೆಸ್ ಗೆ ವಿಪಕ್ಷ ಸ್ಥಾನದಲ್ಲಿ ಕೂರಲು ಶಕ್ತಿಯಿಲ್ಲ ಎಂದು ಲೇವಡಿ ಮಾಡಿದರು.
ರಾಹುಲ್ ಗಾಂಧಿ ನಾಯಕತ್ವ ಬೇಡ ಅಂತಾ ರಾಜೀನಾಮೆ ನೀಡಿದ್ದಾರೆ. ತಾತ್ಕಾಲಿಕವಾಗಿ ಎಐಸಿಸಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರಿಗೆ ಅನಾರೋಗ್ಯವಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ನಾಯಕತ್ವವೇ ಇಲ್ಲ. ಕಾಂಗ್ರೆಸ್ ಅನ್ನ ಕಾಂಗ್ರೆಸ್ ನಾಯಕರೇ ಮುಗಿಸುತ್ತಿದ್ದಾರೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟೀಕಿಸಿದರು.
Key words: disqualified MLA- MTB Nagaraj -challenged –Siddaramaiah