ಮೈಸೂರಿನ ಬಿಷಪ್ ನಿವಾಸದೆದುರು ‘ಹೈಡ್ರಾಮಾ’ ತಂದ ಟೆನ್ಷನ್….

ಮೈಸೂರು,ನ,4,2019(www.justkannada.in):  ಮೈಸೂರಿನ ಬಿಷಪ್ ನಿವಾಸದ ಎದುರು ಇಂದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.  ಬಿಷಪ್ ವಿರುದ್ದ ಸಂಘಟನೆಯೊಂದರ ಸದಸ್ಯರು ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಬಿಷಪ್ ಪರವಿರುವ ಕೆಲವರು ಅವರ ನಿವಾಸದ ಎದುರು ಜಮಾಯಿಸಿದ್ದರು.

ಬಿಷಪ್ ನಿವಾಸದ ಬಳಿ ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತಿನ ಚಕಮಕಿ ನಡೆಸಿದರು. ಮುಂದುವರೆದು ತಳ್ಳಾಟ ನೂಕಾಟ ಸಹ ನಡೆದುಹೋಯಿತು.

ಏನಿದು ಘಟನೆ…..?

ಇಂದು ಬೆಳಿಗ್ಗೆ ಮುಂಬೈ ಹಾಗೂ ಮಂಗಳೂರು ಮೂಲದ ಸಂಘಟನೆಯೊಂದರ ಸದಸ್ಯರು ವಕೀಲರ ಜತೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಆಗಮಿಸಿ ಪತ್ರಿಕಾಗೋಷ್ಠಿಗೆ ಮುಂದಾಗಿದ್ದರು. ಆದರೆ ಗೋಷ್ಠಿ ನಡೆಸಲು ಅವಕಾಶ ಲಭಿಸದ ಹಿನ್ನೆಲೆಯಲ್ಲಿ ಸಮೀಪದ ಮೈದಾನದಲ್ಲೇ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದರು. ಇದರ ಒಟ್ಟು ಸಾರಾಂಶ ಮೈಸೂರಿನ ಬಿಷಪ್ ವಿಲಿಯಮ್ಸ್ ವಿರುದ್ದ ಮಹಿಳಾ ದೌರ್ಜನ್ಯ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮುಂತಾದ ಆರೋಪಗಳನ್ನ ಮಾಡಿದ್ದರು.

ಈ ಆರೋಪಕ್ಕೆ ಸಂಬಂಧಿಸಿದಂತೆ ಬಿಷಪ್ ಅವರಿಂದ ಪ್ರತಿಕ್ರಿಯೆ ಪಡೆಯಲು ಮಾಧ್ಯಮಗಳು ಬಿಷಪ್ ನಿವಾಸಕ್ಕೆ ತೆರಳಿದಾಗ, ಬಿಷಪ್ ನ ಕೆಲ ಅನುಯಾಯಿಗಳು ಮಾಧ್ಯಮದ ವಿರುದ್ದ ಹರಿಹಾಯ್ದರು. ಯಾರೋ ಒಂದಿಬ್ಬರು ಮಾಡುವ ಸುಳ್ಳು ಆರೋಪಗಳನ್ನ ಬಿತ್ತರಿಸಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಪಷ್ಟನೆ…

ಘಟನೆಗೆ ಸಂಭಂಧಿಸಿದಂತೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಮೈಸೂರಿನ ಬಿಷಪ್ ಡಾ.ಕೆ.ಎ ವಿಲಿಯಮ್ ಹೇಳಿದ್ದಿಷ್ಟು…

ಮೈಸೂರಿನ ಬಿಷಪ್ ಆದ ನಂತರ ನಾನು ಸಾಕಷ್ಟು ಅಭಿವೃದ್ದಿ ಕೆಲಸಗಳನ್ನ ಮಾಡಿದ್ದೇನೆ. ನಮ್ಮ ಈ ಕೆಲಸ ಕಾರ್ಯಗಳನ್ನ ಸಹಿಸದ ಕೆಲವರು ಈ ರೀತಿ ಸುಳ್ಳು ಆರೋಪ ಮಾಡಿದ್ದಾರೆ. ಆರೋಪ ಮಾಡಿರುವ ವ್ಯಕ್ತಿಗಳು ಈ ಬಗ್ಗೆ ನನ್ನನ್ನ ಸಂಪರ್ಕಿಸಿಲ್ಲ.  ನನ್ನ ಮೇಲಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಯಾವ ಉದ್ದೇಶಕ್ಕಾಗಿ ಆರೋಪ ಮಾಡಿದ್ದಾರೋ ಗೊತ್ತಿಲ್ಲ. ಈ ಸಂಬಂಧ ಗುರುವಾರ ಚರ್ಚ್ ನ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಈ ಸಭೆಗೆ ಆರೋಪ ಮಾಡಿರುವ ವ್ಯಕ್ತಿಗಳನ್ನ ಆಹ್ವಾನಿಸುತ್ತೇವೆ ಎಂದು ಡಾ. ವಿಲಿಯಮ್ಸ್ ಸ್ಪಷ್ಟಪಡಿಸಿದರು.

Key words: mysore- Bishop- Residence-highdrama-media