ಬೆಂಗಳೂರು,ನ,12,2019(www.justkannada.in): ಅನರ್ಹತೆ ಹಿಂದಿನ ಸ್ಪೀಕರ್ ಅನರ್ಹಗೊಳಿಸಿದ್ದ ಆದೇಶವನ್ನ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯ ತೀರ್ಪನ್ನ ಸುಪ್ರೀಂಕೋರ್ಟ್ ನಾಳೆ ಪ್ರಕಟಿಸಲಿದ್ದು ಅನರ್ಹ ಶಾಸಕರು ನವದೆಹಲಿಯತ್ತ ದೌಡಾಯಿಸುತ್ತಿದ್ದಾರೆ. ಈ ನಡುವೆ ಇಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸಕ್ಕೆ ತೆರಳಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಇನ್ನು ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಶರತ್ ಬಚ್ಚೇಗೌಡ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಹಿನ್ನೆಲೆ ಎಂಟಿಬಿ ನಾಗರಾಜ್ ಕಂಗಾಲಾಗಿದ್ದಾರೆ. ಹೀಗಾಗಿ ಶರತ್ ಬಚ್ಚೇಗೌಡ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿ. ಅವರನ್ನ ಮನವೊಲಿಸಿ ಎಂದು ಎಂಟಿಬಿ ನಾಗರಾಜ್ ಸಿಎಂ ಬಿಎಸ್ ವೈಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ಸಮಯದಲ್ಲಿ ಶರತ್ ಬಚ್ಚೇಗೌಡ ಜತೆ ಮಾತನಾಡುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಎಂಟಿಬಿ ನಾಗರಾಜ್ ಗೆ ಭರವಸೆ ನೀಡಿದ್ದಾರೆ. ನಾಳೆ ಸುಪ್ರೀಂಕೋರ್ಟ್ ನಿಂದ ತೀರ್ಪು ಹೊರಬರುವ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ದೆಹಲಿಯತ್ತ ಮುಖಮಾಡಿದ್ದಾರೆ. ತೀರ್ಪು ಒಂದು ವೇಳೆ, ವ್ಯತಿರಿಕ್ತವಾಗಿ ಬಂದರೆ ಮುಂದಿನ ನಡೆಯ ಬಗ್ಗೆಯೂ ಶಾಸಕರು ಚರ್ಚೆ ನಡೆಸಿದ್ದಾರೆ.
Key words: hosakote- – Sharath Bachegowda –competition-MTB Nagaraj – CM BS yeddyurappa