ಬೆಂಗಳೂರು,ನ,13,2019(www.justkannada.in): ನಿಯಮಿತವಾಗಿ ಮತ್ತು ವೃತ್ತಿಪರವಾಗಿ ಯೋಗವನ್ನು ಮಾಡಿದರೆ ಡಯಾಬಿಟಿಸ್ ಅಥವಾ ಮಧುಮೇಹವನ್ನು ಸುಲಭವಾಗಿ ನಿಯಂತ್ರಣ ಮಾಡಬಹುದು. ಕಳೆದ ಹಲವು ವರ್ಷಗಳಿಂದ ಈ ಕುರಿತು ವ್ಯಾಪಕ ಸಂಶೋಧನೆ ನಡೆಸಿರುವ ಬೆಂಗಳೂರಿನ ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಅದನ್ನು ದೃಢಪಡಿಸಿದೆ.
ನಾಸಾದ ನಿವೃತ್ತ ವಿಜ್ಞಾನಿ ಮತ್ತು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಆಗಿರುವ ಡಾ.ಎಚ್.ಆರ್. ನಾಗೇಂದ್ರ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯವು ಯೋಗದ ಕುರಿತು ನಾನಾ ಬಗೆಯ ಸಂಶೋಧನೆಗಳನ್ನು ನಡೆಸುತ್ತಿದೆ. ಡಾ. ಆರ್ನಾಗರತ್ನ (ಡಾ.ಎಚ್.ಆರ್.ನಾಗೇಂದ್ರ ಅವರ ಸಹೋದರಿ) ತಜ್ಞ ವೈದ್ಯರು ಮತ್ತು ಎಫ್ಆರ್ಸಿಎಸ್ ಆಗಿದ್ದು, ಯೋಗ ಸಂಶೋಧನೆಯಲ್ಲಿ ನಾಗೇಂದ್ರ ಅವರಿಗೆ ಕೈಜೋಡಿಸಿದ್ದಾರೆ. ಎಸ್-ವ್ಯಾಸ ಯೋಗ ಶಿಕ್ಷಣ, ಯೋಗ ಚಿಕಿತ್ಸೆ ಮತ್ತು ಯೋಗ ಸಂಶೋಧನೆಯಲ್ಲಿ ಕಳೆದ ನಾಲ್ಕು ದಶಕಗಳಿಂದ ತನ್ನನ್ನು ತೊಡಗಿಸಿಕೊಂಡಿದೆ.
ಬಹು ಬಗೆಯ ಅಂಗವೈಕಲ್ಯಗಳನ್ನು ಸೃಷ್ಟಿಸಬಲ್ಲದು ಎನ್ನುವ ಅಪಾಯವಿರುವ ಟೈಪ್ 2 ಡಯಾಬಿಟಿಸ್ ಮೆಲ್ಲಿಟಸ್ ಅನ್ನು ನಿಯಂತ್ರಣದಲ್ಲಿಡಲು ಯೋಗ ಅತ್ಯಂತ ಸುಲಭ ಮತ್ತು ಸರಳ ವಿಧಾನ ಎಂಬುದು ಎಸ್-ವ್ಯಾಸ ನಡೆಸಿರುವ ನಾಲ್ಕು ದಶಕಗಳ ಸಂಶೋಧನೆಯಿಂದ ಸಾಬೀತಾಗಿದೆ.
ನವೆಂಬರ್ 14ರ ವಿಶ್ವ ಮಧುಮೇಹ ದಿನದ ಅಂಗವಾಗಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯಧಾಮದ ನಿರ್ದೇಶಕಿ ಮತ್ತು ಎಸ್-ವ್ಯಾಸದ ಸ್ಥಾಯಿ ಸಂಶೋಧನಾ ಸಮಿತಿಯ ನಿರ್ದೇಶಕಿ ಡಾ.ಆರ್. ನಾಗರತ್ನ ಅವರು, “ಯೋಗದಂತಹ ಅಭ್ಯಾಸಗಳು ಆಧುನಿಕ ಔಷಧಗಳ ಸಾಂಪ್ರದಾಯಿಕ ಪದ್ಧತಿಗಳಿಗೆ ಭಾರತವನ್ನು ಮಧುಮೇಹ ರಾಜಧಾನಿಯನ್ನಾಗಿಸುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಹಕಾರಿಯಾಗುತ್ತಿವೆ” ಆ ನಿಟ್ಟಿನಲ್ಲಿ ಅತಿ ಸರಳ ಮತ್ತು ದುಬಾರಿಯಲ್ಲದ ಯೋಗ ವಿಧಾನ ಡಯಾಬಿಟಿಸ್ಗೆ ರಾಮಬಾಣವಾಗಿದೆ ಎಂದರು.
ಎಸ್-ವ್ಯಾಸದಲ್ಲಿ ಸಂವಹನ ವಿಭಾಗದ ನಿರ್ದೇಶಕರಾದ ಡಾ. ಶ್ಯಾಂಸುಂದರ್ ಅಗರಂ ಅವರು ಮಾತನಾಡಿ, ಎಸ್-ವ್ಯಾಸದಲ್ಲಿ ಜನ ಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಗದ ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಯೋಗ ಮತ್ತು ಪ್ರಾಣಾಯಾಮಗಳ ಮೂಲಕ ಯಾವ ರೀತಿ ರಕ್ತದೊತ್ತಡವನ್ನು ಸಾಮಾನ್ಯ ಮಟ್ಟಕ್ಕೆ ತರಬಹುದಾಗಿದೆ ಮತ್ತು ಆ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದಾಗಿದೆ ಎಂಬುದನ್ನು ಕುರಿತು ತಮ್ಮ ವೈಯಕ್ತಿಕ ಅನುಭವ ಮೂಲಕ ಹಂಚಿಕೊಂಡರು. ಯೋಗವು ಜೀವನಶೈಲಿಯ ಮೇಲೆ ಅವಲಂಬಿತವಾಗಿರುತ್ತದೆ. ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳೊಂದಿಗೆ ಯೋಗ ಆಧಾರಿತ ಚಟುವಟಿಕೆಗಳು ಹಿಂದೆಂದಿಗಿಂತಲೂ ಈಗ ಒತ್ತಡವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿವೆ. ಭಾರತದಲ್ಲಿ ಟೈಪ್೨ ನಂತಹ ಲಕ್ಷಣಗಳಿಂದ ಉಂಟಾಗುವ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಗವು ಸಾಕಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಸಂಶೋಧನೆಗಳು ಸಾಬೀತು ಮಾಡಿವೆ. ಹೆಚ್ಚು ಅಪಾಯದಲ್ಲಿ ಯುವ ಸಮುದಾಯ ಭಾರತ ವಿಶ್ವದ ಮಧುಮೇಹ ರಾಜಧಾನಿಯಾಗುವ ನಿಟ್ಟಿನಲ್ಲಿ ಅತಿ ವೇಗದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಮಧುಮೇಹದ ಸಂಕೀರ್ಣತೆಯ ಪರಿಣಾಮ ಮಧುಮೇಹ ರೋಗಿಗಳಲ್ಲಿ ಸಾವಿನ ಅಪಾಯ ಹೆಚ್ಚುತ್ತಿದೆ. ಟೈಪ್ ೨ ಡಯಾಬಿಟಿಸ್ ಮೆಲ್ಲಿಟಸ್ (ಟಿ೨ಡಿಎಂ) ನ ಅಪಾಯವನ್ನು ಭಾರತ ಎದುರಿಸುತ್ತಿದೆ. ಇಲ್ಲಿ ವಿಶ್ವದ ಅತಿ ಹೆಚ್ಚು ಟಿ೨ಡಿಎಂ ರೋಗಿಗಳು(೬೧ ದಶಲಕ್ಷಕ್ಕೂ ಅಧಿಕ ಜನರು) ಇದ್ದು, ಆ ಸಂಖ್ಯೆ ೨೦೩೦ರ ವೇಳೆಗೆ ದ್ವಿಗುಣವಾಗುವ ಆತಂಕ ಎದುರಾಗಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಟಿ೨ಡಿಎಂ ಗ್ರಾಮೀಣ ಭಾರತದಲ್ಲಿ ಹೆಚ್ಚಾಗುತ್ತಿದೆ ಮತ್ತು ಇದು ಯುವ ಸಮುದಾಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅನಾರೋಗ್ಯಕರವಾದ ಜೀವನ ಶೈಲಿ. ದೊಡ್ಡ ಪ್ರಮಾಣದಲ್ಲಿ ಜನರಲ್ಲಿ ಈ ಟಿ೨ಡಿಎಂ ಹರಡುವಿಕೆ ಪ್ರಮಾಣ ಹೆಚ್ಚಾಗಿದ್ದು, ಅಪಾಯದ ಮಟ್ಟವೂ ಮಿತಿ ಮೀರುತ್ತಿದೆ. ಇದು ಮುಂಬರುವ ದಿನಗಳಲ್ಲಿ ದೇಶದ ಆರೋಗ್ಯ ಮತ್ತು ಆರ್ಥಿಕತೆ ಮೇಲೆ ದೊಡ್ಡ ಮಟ್ಟದ ಹೊರೆಯಾಗಲಿದೆ.
೨೦೧೧ ರಲ್ಲಿ ಈ ಟಿ೨ಡಿಎಂ ಹರಡುವಿಕೆ ಪ್ರಮಾಣ ಶೇ.೮.೩ ರಷ್ಟಿತ್ತು. ೨೦೦೬ರಲ್ಲಿ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ೪೦.೯ ದಶಲಕ್ಷವಿದ್ದರೆ, ೨೦೨೫ ರ ವೇಳೆಗೆ ೬೯.೯ ದಶಲಕ್ಷ ಮತ್ತು ೨೦೩೦ರ ವೇಳೆಗೆ ೮೦ ದಶಲಕ್ಷಕ್ಕೆ ತಲುಪುವ ಆತಂಕ ಎದುರಾಗಿದೆ. ಮಧುಮೇಹ ನಿಲ್ಲಿಸುವ ಚಳವಳಿ(ಸ್ಟಾಪ್ ಡಯಾಬಿಟಿಸ್ ಮೂವ್ಮೆಂಟ್) ಆಂದೋಲನವನ್ನು ಎಸ್-ವ್ಯಾಸ ಯೋಗ ವಿಶ್ವವಿದ್ಯಾಲಯ ಹಲವು ವರ್ಷಗಳ ಹಿಂದೆ ಆರಂಭಿಸಿದೆ. ಅದರ ಪ್ರಮುಖ ಉದ್ದೇಶ ಭಾರತವನ್ನು ವಿಶ್ವದ ಮಧುಮೇಹದ ರಾಜಧಾನಿ ಎಂಬ ಕಳಂಕದಿಂದ ದೂರ ಮಾಡುವುದು.
ಎಸ್ಡಿಎಂ ಮೂಲಕ ಮಧುಮೇಹವನ್ನು ದೂರ ಮಾಡುವ ಬಗೆ, ಅದನ್ನು ಯೋಗದ ಮೂಲಕ ಯಾವ ರೀತಿ ನಿಯಂತ್ರಣದಲ್ಲಿಡಬಹುದು ಎಂಬುದು ಸೇರಿದಂತೆ ಯೋಗದಿಂದ ಏನೇನು ಉಪಯೋಗಗಳಿವೆ ಎಂಬುದರ ಬಗ್ಗೆ ಜನಸಾಮಾನ್ಯರಿಗೆ ತಿಳಿ ಹೇಳಲು ಹಲವಾರು ಉಪನ್ಯಾಸಗಳು, ತರಬೇತಿಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
Key words: Yoga – diabetes- control- Confirmed –bangalore-S-Vyasa Yoga University