ಮೈಸೂರು,ನ,16,2019(www.justkannada.in): ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿರುವವರು ಈ ಹಿಂದೆಯೂ ಕ್ಷಮೆ ಯಾಚನೆ ಮಾಡಿದ್ದಾರೆ. ಅಂಬೇಡ್ಕರ್ ಗೂ ದಲಿತ ಸಮುದಾಯಕ್ಕೂ ತಾಯಿ ಮಗುವಿನ ಸಂಬಂಧವಿದೆ. ಶಿಕ್ಷಣ ಇಲಾಖೆ ಹೊರ ತಂದಿರುವ ಕೈಪಿಡಿಯಲ್ಲಿ ತಪ್ಪಾಗಿದೆ ಎಂದು ತಿಳಿದು ಬಂದಿದೆ. ಉದ್ದೇಶ ಪೂರ್ವಕವಾಗಿ ಯಾರು ಕೂಡ ಈ ರೀತಿ ಮಾಡುವುದಿಲ್ಲ ಎಂದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.
ಸಂವಿಧಾನ ದಿನಾಚರಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ನೀಡಿದ್ದ ಕೈಪಿಡಿಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ ಆಕ್ಷೇಪಾರ್ಹವಾಗಿ ಉಲ್ಲೇಖ ಮಾಡಿರುವ ವಿಚಾರ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್, ಶೋಷಣೆಗೆ ಒಳಗಾಗಿದ್ದ ದಲಿತ ಸಮುದಾಯಕ್ಕೆ ಅಂಬೇಡ್ಕರ್ ಆಶಾಕಿರಣವಾಗಿದ್ದಾರೆ. ಅಂಬೇಡ್ಕರ್ ಸಂವಿಧಾನದ ಪಿತಾಮಹ. ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚನೆ ಮಾಡಿಲ್ಲ. ಎಂಬುದು ಸ್ವತಃ ಅಂಬೇಡ್ಕರ್ ಅವರಿಗೂ ಗೊತ್ತಿತ್ತು. ಆದರೂ ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ಅತ್ಯುನ್ನತವಾದ ಸಂವಿಧಾನ ರಚನೆ ಮಾಡಿದ್ದಾರೆ. ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ಏಳು ಮಂದಿ ಸದಸ್ಯರಿದ್ದರು. ಇದರಲ್ಲಿ ಅಂಬೇಡ್ಕರ್ ಕೂಡ ಒಬ್ಬರಾಗಿದ್ದರು. ಏಳು ಮಂದಿಯಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದಾಗ ಎಲ್ಲರೂ ಸೇರಿ ಅಂಬೇಡ್ಕರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಏಳು ಮಂದಿ ಸದಸ್ಯರ ಪೈಕಿ ಅಂಬೇಡ್ಕರ್ ಅವರ ಪಾತ್ರ ಪ್ರಮುಖವಾಗಿದೆ. ಉಪ ಸಮಿತಿಗಳು ನೀಡಿದ ವರದಿಯನ್ನು ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
193 ದಿನಗಳ ಸುದೀರ್ಘ ಅವಧಿಯ ಕಾಲ ಚರ್ಚಿಸಿ ಸಂವಿಧಾನ ರಚನೆ ಮಾಡಿದ್ದಕ್ಕೆ, ಸಮಿತಿಯ ಸದಸ್ಯರಾಗಿದ್ದ ಕೃಷ್ಣಮಾಚಾರಿ, ಬಾಬು ರಾಜೇಂದ್ರ ಪ್ರಸಾದ್, ಬೆನಗಲ್ ನರಸಿಂಹರಾವ್ ಅವರು ಅಂಬೇಡ್ಕರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೀಗ ಶಿಕ್ಷಣ ಇಲಾಖೆ ಹೊರ ತಂದಿರುವ ಕೈಪಿಡಿಯಲ್ಲಿ ತಪ್ಪಾಗಿದೆ ಎಂದು ತಿಳಿದು ಬಂದಿದೆ. ಸರ್ಕಾರದ ಗಮನಕ್ಕೆ ಬಾರದೇ ಈ ರೀತಿ ಆಗಿದೆ. ಶಿಕ್ಷಣ ಸಚಿವರು ತಮ್ಮ ಗಮನಕ್ಕೆ ತರಬೇಕೆಂದು ಹೇಳಿದ್ದರೂ ಸಹ ಅಧಿಕಾರಿಗಳು ಸಚಿವರ ಗಮನಕ್ಕೆ ತರದೇ ಕೈಪಿಡಿಯನ್ನು ವೆಬ್ ಸೈಟ್ ಗೆ ಹಾಕಿದ್ದಾರೆ. ಕರ್ತವ್ಯ ಲೋಪದಡಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಈ ಬಗ್ಗೆ ಶಿಕ್ಷಣ ಸಚಿವರು ನನಗೆ ತಿಳಿಸಿದ್ದಾರೆ. ಇದನ್ನು ರಾಜ್ಯ ಸರ್ಕಾರ ವಿಚಾರಣೆ ನಡೆಸುತ್ತಿದ್ದು, ಈ ಬಗ್ಗೆ ಹೇಳಿಕೆಗಳನ್ನು ನೀಡುತ್ತಿರುವವರು ಅರ್ಥ ಮಾಡಿಕೊಳ್ಳಬೇಕು, ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಅಂಬೇಡ್ಕರ್ ಎಂದೊಡನೆ ನಾವು ಉದ್ವೇಗಕ್ಕೆ ಒಳಗಾಗುತ್ತೇವೆ ಎಂದರು.
ಉದ್ದೇಶ ಪೂರ್ವಕವಾಗಿ ಯಾರು ಕೂಡ ಈ ರೀತಿ ಮಾಡುವುದಿಲ್ಲ. ಮೊಸರಲ್ಲಿ ಕಲ್ಲು ಹುಡುಕುವವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಈ ಹಿಂದೆ ಅಂಬೇಡ್ಕರ್, ಸಂವಿಧಾನದ ಬಗ್ಗೆ ವಿವಾದಾಸ್ಪದ ಹೇಳಿಕೆ ನೀಡಿದ್ದ ಅನಂತಕುಮಾರ್ ಹೆಗಡೆ, ಗೋ. ಮಧುಸೂಧನ್ ಸೇರಿದಂತೆ ಇತರರು ಕ್ಷಮೆ ಕೇಳಿದ್ದಾರೆ. ಮೋದಿ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿದ್ದಾರೆ. ಬ್ಯಾಲೆಟ್ ಮೂಲಕ ಆಯ್ಕೆಯಾಗಿದ್ದಾರೆ ಎಂದು ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ಧರಾಮಯ್ಯ ಕಾರಣ…
ಸಮ್ಮಿಶ್ರ ಸರ್ಕಾರ ಪತನವಾಗಲು ವಿ. ಶ್ರೀನಿವಾಸಪ್ರಸಾದ್ ಕಾರಣರೆವೆಂದು ಎಚ್. ವಿಶ್ವನಾಥ್ ಹೇಳಿಕೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಸಮ್ಮಿಶ್ರ ಸರ್ಕಾರ ಬಂದ ದಿನದಿಂದಲೇ ಸಮಸ್ಯೆ ಆರಂಭವಾಗಿತ್ತು. ಕಾಂಗ್ರೆಸ್, ಜೆಡಿಎಸ್ ನವರು ಚುನಾವಣೆ ಪೂರ್ವದಲ್ಲಿ ಬೈದಾಡಿಕೊಂಡಿದ್ದರು. ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಫಲಿತಾಂಶ ಬಂದಾಗ ಏನಾಯಿತು. ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಸರ್ಕಾರ ರಚನೆಗೆ ಬೇಷರತ್ ಬೆಂಬಲ ನೀಡಿತು. ಆಗ ಸಿದ್ದರಾಮಯ್ಯ ಎಲ್ಲಿದ್ದರು, ಕೈ ಕಟ್ಟಿಕೊಂಡು ನಿಂತಿದ್ದರು ಎಂದು ಟೀಕಿಸಿದರು.
ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ಶಾಸಕರು ನೊಂದು ಬೆಂದು ಹೋಗಿದ್ದರು. ಸಮ್ಮಿಶ್ರ ಸರ್ಕಾರ ಬಿದ್ದು ಹೋಗಲು ಸಿದ್ದರಾಮಯ್ಯ ಕಾರಣ. ಕಳೆದ ಚುನಾವಣೆ ಸಂದರ್ಭದಲ್ಲಿ ನಾನೇ ಮತ್ತೆ ಸಿಎಂ ಎಂದಿದ್ದಕ್ಕೆ 17 ಸಚಿವರು ನೆಗೆದು ಬಿದ್ದರು. ಈಗಲೂ ಅದನ್ನೇ ಹೇಳಿಕೊಂಡು ತಿರುಗುತ್ತಿದ್ದಾರೆ. ಹೀಗಾಗಿ ಉತ್ಪ್ರೇಕ್ಷೆಯ ಮಾತುಗಳನ್ನಾಡುವುದನ್ನು ಬಿಡಬೇಕು. ಮುಖ್ಯಮಂತ್ರಿ ಆಗಿದ್ದುಕೊಂಡೇ ಕದ್ದ ಓಡಿ ಹೋಗಿ ಬಾದಾಮಿಯಲ್ಲಿ ಚುನಾವಣೆಗೆ ನಿಂತರು. ಮುಖ್ಯಮಂತ್ರಿ ಆಗಿದ್ದುಕೊಂಡು ಸ್ವಕ್ಷೇತ್ರದಲ್ಲಿ 36 ಸಾವಿರ ಮತಗಳ ಅಂತರದಲ್ಲಿ ಹೀನಾಯವಾಗಿ ಸೋತಿರಿ. ನಿಮಗೆ ಮಾನ ಮರ್ಯಾದೆ ಇದೆಯಾ. ಮುಂದಿನ ಬಾರಿ ನಾನೇ ಅಂಬಾರಿಗೆ ಪುಷ್ಪಾರ್ಚನೆ ಮಾಡ್ತೇನೆ ಅಂದಿದ್ರು ಆದರೆ ಮುಂದೆ ಏನಾಯ್ತು. ಸಿದ್ದರಾಮಯ್ಯಗೆ ಎಲ್ಲೂ ನೆಲೆಯಿಲ್ಲ ಎಂದು ವಿ.ಶ್ರೀನಿವಾಸ್ ಪ್ರಸಾದ್ ಲೇವಡಿ ಮಾಡಿದರು.
Key words: Siddaramaiah- Srinivas Prasad – Dr BR Ambedkar -Education Department