ಮೈಸೂರು,ನ,21,2019(www.justkannada.in): ರೈತರ ಜಮೀನಿಗೆ ಪರಿಹಾರ ನೀಡಿದ ಹಿನ್ನೆಲೆ ಕೋರ್ಟ್ ಆದೇಶದ ಮೇರೆಗೆ ಕೋರ್ಟ್ ಸಿಬ್ಬಂದಿ ಡಿಸಿ ಮತ್ತು ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಮುಂದಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಸಾಥಗಳ್ಳಿ ಭಾಗದ ಪ್ರದೇಶದ ನಿವಾಸಿಗಳಿಗೆ ಸರ್ಕಾರದಿಂದ ಪರಿಹಾರ ನೀಡಬೇಕಿತ್ತು. 20 ವರ್ಷಗಳ ಹಿಂದೆಯೇ ಮಧುವನ ಸೊಸೈಟಿಗೆ ಸುಮಾರು 72 ಎಕರೆ ಜಮೀನನ್ನ ಜಿಲ್ಲಾಡಳಿತ ಹಸ್ತಾಂತರಿಸಿತ್ತು. ಈ ಸಂಬಂಧ 12 ವರ್ಷಗಳ ಹಿಂದೆಯೇ ಜಮೀನಿನ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ 10 ವರ್ಷದ ಹಿಂದೆಯೇ ಜಮೀನಿನ ಮಾಲೀಕರಿಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು.
ಆದರೆ 10 ವರ್ಷ ಕಳೆದರೂ ಪರಿಹಾರ ನೀಡದ ಹಿನ್ನಲೆ. ಇದೀಗ ಮೈಸೂರು ಡಿಸಿ ಮತ್ತು ಎಸಿ ಕಚೇರಿಯ ಪೀಠೋಪಕರಣ ಜಪ್ತಿಗೆ ಮೈಸೂರು ಸಿಜೆಎಂ ನ್ಯಾಯಲಯ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶದ ಮೇರೆಗೆ ಕೋರ್ಟ್ ಅಧಿಕಾರಿ ಅಮಿನ್ ಜೊತೆ ಜಮೀನು ಮಾಲೀಕರು ಮೈಸೂರಿನ ಡಿಸಿ ಆಫೀಸ್ ಗೆ ಬಂದಿದ್ದರು. ಈ ಸಮಯದಲ್ಲಿ ಡಿಸಿ ಎಸಿ ಕಾರುಗಳ ಜಪ್ತಿಗೆ ಕೋರ್ಟ್ ಅಧಿಕಾರಿಗಳು ಮುಂದಾಗಿದ್ದರು. ಕೋರ್ಟ್ ಅಧಿಕಾರಿಗಳನ್ನ ಕಂಡು ಡಿಸಿ ಮತ್ತು ಎಸಿ ಕಾರನ್ನ ಕಾರು ಚಾಲಕ ಬೇರೆಡೆಗೆ ಸ್ಥಳಾಂತರಿಸಿದ್ದರು.
ಈ ವೇಳೆ ಕೋರ್ಟ್ ಆದೇಶ ಪಾಲಿಸುವಂತೆ ಎಸಿಗೆ ಕೋರ್ಟ್ ಸಿಬ್ಬಂದಿ ಮನವಿ ಮಾಡಿದ್ದು, ಒಂದು ವಾರದ ಕಾಲ ಗಡುವು ನೀಡುವಂತೆ ಎಸಿ ಡಾ.ವೆಂಕಟರಾಜು ಕೇಳಿದರು. ಇನ್ನು ಎಸಿ ಡಾ.ವೆಂಕಟರಾಜು ಮನವಿಗೆ ಸ್ಪಂದಿಸಿದ ಕೋರ್ಟ್ ಅಧಿಕಾರಿಗಳು ಯಾವುದೇ ಪೀಠೋಪಕರಣಗಳನ್ನ ಜಪ್ತಿ ಮಾಡದ ಹಾಗೆಯೇ ವಾಪಸ್ ತೆರಳಿದರು.
Key words: relief – farmer-DC – AC – Office Furniture- court -mysore