ಮೈಸೂರು,ನ,22,2019(www.justkannada.in): ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.
ಶಾಸಕ ತನ್ವೀರ್ ಸೇಠ್ ಹತ್ಯೆಗೆ ಮಿಲಾದ್ ಪಾರ್ಕ್ ಹಾಗೂ ಸಾಕಷ್ಟು ಸ್ಥಳಗಳಲ್ಲಿ ಫರ್ಹಾನ್ ಪಾಷಾ ಹೊಂಚು ಹಾಕಿದ್ದನೆಂಬ ಆಘಾತಕಾರಿ ಸಂಗತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಅಲ್ಲದೆ ಹಲ್ಲೆ ನಡೆಸಿರುವ ಆರೋಪಿ ಫರ್ಹಾನ್ ಪಾಷಾ ಮುಡಾ ಬಳಿಯೂ ಕಾಣಿಸಿಕೊಂಡಿದ್ದ. ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೋರಿ ಮುಡಾ ಬಳಿ ಶಾಸಕ ತನ್ವೀರ್ ಸೇಠ್ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆದ ಸ್ಥಳದಲ್ಲಿಯೂ ಫರ್ಹಾನ್ ಪಾಷಾ ಸಹ ಹಾಜರಿದ್ದ ಎಂಬ ವಿಚಾರ ತನಿಖೆ ವೇಳೆ ಗೊತ್ತಾಗಿದೆ.
ಸೈದ್ಧಾಂತಿಕವಾಗಿ ಹೊಂದಿದ್ದ ಭಿನ್ನಾಭಿಪ್ರಾಯ ಹಾಗು ರಾಜಕೀಯವಾಗಿ ಪ್ರಾಬಲ್ಯ ಸಾಧಿಸಲು ಅಡ್ಡಿಯಾಗಿರುವ ತನ್ವೀರ್ ಸೇಠ್ ಹತ್ಯೆ ಮಾಡಲು ಸಂಘಟನೆಯೊಂದು ನಡೆಸಿದ್ದ ಸಂಚಿನಲ್ಲಿ ಫರ್ಹಾನ್ ಪಾಷಾ ಕೈ ಜೋಡಿಸಿರುವ ಬಗ್ಗೆಯೂ ಮಾಹಿತಿ ತಿಳಿದು ಬಂದಿದ್ದು, ಆರೋಪಿ ಫರ್ಹಾನ್ ಪಾಷಾ ನೀಡಿದ ಮಾಹಿತಿ ಮೇರೆಗೆ ಮತ್ತೆ ಐವರು ಆರೋಪಿಗಳನ್ನು ಪೊಲೀಸ್ ವಿಶೇಷ ತನಿಖಾ ತಂಡ ಬಂಧಿಸಿದೆ. ಅಕ್ರಂ, ಅಬೀದ್ ಪಾಷಾ, ನೂರ್ ಖಾನ್, ಮುಜೀಬ್ ಹಾಗು ಮುಜಾಮಿಲ್ ಎಂಬ ಐವರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಬಂಧಿತ ಐವರು ಆರೋಪಿಗಳ ಪೈಕಿ ಅಬೀದ್ ಪಾಷಾ ಎಂಬಾತ ಬಿಜೆಪಿ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಹತ್ಯೆಯಲ್ಲೂ ಭಾಗಿಯಾಗಿರುವ ಸ್ಫೋಟಕ ಮಾಹಿತಿ ತಿಳಿದು ಬಂದಿದೆ. ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದಕ್ಕೂ ಮುನ್ನ ಫರ್ಹಾನ್ ಪಾಷಾನಿಗೆ ವ್ಯವಸ್ಥಿತವಾಗಿ ತರಬೇತಿ ನೀಡಲಾಗಿತ್ತೆಂಬ ಮಹತ್ವದ ಅಂಶ ಸಹ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ದಾಳಿ ನಡೆಸಿದ ವೀಡಿಯೋ ದೃಶ್ಯಾವಳಿಗಳನ್ನು ವ ತನಿಖಾಧಿಕಾರಿಗಳುಪರಿಶೀಲಿಸಿದ್ದಾಋಎ. ಈ ನಡುವೆ ಯಾವುದೇ ತರಬೇತಿ ಇಲ್ಲದೇ ಈ ರೀತಿ ದಾಳಿ ನಡೆಸಲು ಸಾಧ್ಯವಿಲ್ಲ ಎಂದು ಪೊಲೀಸರು ನಿರ್ಧರಿಸಿದ್ದು, . ದಾಳಿಗೆ ಸಾಕಷ್ಟು ಪೂರ್ವ ಸಿದ್ಧತೆ ಇತ್ತು ಎಂಬುದಕ್ಕೆ ಪುರಾವೆಗಳನ್ನು ಕಲೆಹಾಕಿದ್ದಾರೆ.
ಪ್ರಮುಖ ಆರೋಪಿ ಫರ್ಹಾನ್ ಪಾಷಾನ ಮೊಬೈಲ್ ಕರೆಗಳ ಜಾಡು ಹಿಡಿದು ತನಿಖಾಧಿಕಾರಿಗಳು ತನಿಖೆ ಕೈಗೊಂಡಿದ್ದು, ಫರ್ಹಾನ್ ಪಾಷಾನಿಗೆ ಪದೇ ಪದೇ ಫೋನ್ ಕರೆ ಮಾಡಿದ ಹಾಗು ಹೆಚ್ಚಿನ ಸಮಯ ಮಾತನಾಡಿರುವವರ ಸಂಖ್ಯೆ ಪತ್ತೆ ಹಚ್ಚಿ ಅನುಮಾನ ಬಂದವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
Key words: mysore- mla-Tanveer Saith –assult-case-Explosive -information -police investigation