ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿ ನೀಡುವ ಗ್ರಾಮ ಸೇವೆ ಇಂದಿನಿಂದ ಆರಂಭ….

ರಾಮನಗರ ನ. 23,2019(www.justkannada.in): ಸರ್ಕಾರದ ಜನಪರ ಮಾಹಿತಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರಾಮನಗರ ಜಿಲ್ಲಾ ವಾರ್ತಾಧಿಕಾರಿ ಎಸ್. ಶಂಕರಪ್ಪ ಅವರು ಯೋಜಿಸಿರುವ ವಿನೂತನ ಕಾರ್ಯಕ್ರಮ ಗ್ರಾಮಸೇವೆ ಇಂದಿನಿಂದ ಚಾಲನೆಗೊಳ್ಳಲಿದೆ.

ಕನಕಪುರ ತಾಲ್ಲೂಕಿನ ಕಸಬಾ ಹೋಬಳಿ ಕೂತಗಾನಹಳ್ಳಿ ಬಳಿಯ ಇರುಳಿಗರ ಕಾಲೋನಿಯಲ್ಲಿ ನ. 23ರಂದು ಮಧ್ಯಾಹ್ನ ಆರಂಭಗೊಳ್ಳಲಿರುವ ಗ್ರಾಮಸೇವೆ ಕಾರ್ಯಕ್ರಮ ಮೊದಲು ಸ್ಥಳೀಯರ ನೆರವಿನೊಂದಿಗೆ ಇಡೀ ಗ್ರಾಮದ ಸ್ವಚ್ಛತೆ ನಡೆಸಿ ಆರೋಗ್ಯ ಇಲಾಖೆ ಸಹಕಾರದಿಂದ ನಡೆಯಲಿರುವ ಆರೋಗ್ಯ ಶಿಬಿರದಲ್ಲಿ ಗ್ರಾಮದ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಿ ಸಂಜೆ ಅಲ್ಲಿಯೇ ವಾಸ್ತವ್ಯ ಹೂಡಲಾಗುವುದು.

ಸಂಜೆ ಸರ್ಕಾರಿ ಕಾರ್ಯಕ್ರಮಗಳ ಮಾಹಿತಿಯನ್ನು ಮನೆ ಮನೆಗೆ ಹಂಚುವ ಜೊತೆಗೆ ಅಲ್ಲಿಯೇ ವಾಸ್ತವ್ಯ ಹೂಡಿ ಗ್ರಾಮಸ್ಥರನ್ನು ಒಂದೆಡೆ ಸೇರಿಸಿ ಸಭೆ ನಡೆಸಿ, ಬೀದಿ ನಾಟಕ, ಸಂಗೀತ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಯೋಜನೆಗಳ ಮಹತ್ವವನ್ನು ಸಾರಲಾಗುವುದು.

ಗ್ರಾಮೀಣ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮಟ್ಟವನ್ನು ಸುಧಾರಿಸಲು ಸರ್ಕಾರ ಹೊಸ ಯೋಜನೆಗಳನ್ನು ರೂಪಿಸುತ್ತದೆ. ಇದರಿಂದ ಆಗುವ ಅನುಕೂಲತೆಯ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಇದಕ್ಕಾಗಿ ಜನರ ಜತೆ ವಾಸ್ತವ್ಯ ಹೂಡಿ ಸರ್ಕಾರದ ಯೋಜನೆಗಳ ಮಾಹಿತಿ ಮನೆ ಬಾಗಿಲಿಗೆ ತಲುಪಿಸಲು ಗ್ರಾಮಸೇವೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ದೃಢ ಹೆಜ್ಜೆಗಳು ಎಂಬ ಆಶಯದೊಂದಿಗೆ ಮಾನ್ಯ ಮುಖ್ಯಮಂತ್ರಿಗಳು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೆರವು, ಮೀನುಗಾರರ ಸಾಲ ಮನ್ನಾ, ನೇಕಾರರ ಸಾಲಮನ್ನಾ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ 6000 ರೂ.ಗಳ ಸಹಾಯಧನದೊಂದಿಗೆ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 4000 ರೂ.ಗಳನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಘೋಷಿಸಿರುವ 4000 ರೂ.ಗಳಲ್ಲಿ ಮೊದಲ ಕಂತಿನ 2000 ರೂ.ಗಳನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ. ರೈತರು ಬೆಳೆದ ಹಸಿರು ಮೇವು ಖರೀದಿ ದರ ಪ್ರತಿ ಟನ್ ಗೆ 3000 ರೂ. ಗಳಿಂದ 4000 ರೂ.ಗಳಿಗೆ ಹೆಚ್ಚಿಸಲಾಗಿದೆ.

ಮೀನುಗಾರರ 60 ಕೋಟಿ ರೂ. ಸಾಲ ಮನ್ನಾ ಮಾಡಲು ಯೋಜಿಸಲಾಗಿದ್ದು, ಇದರಿಂದ 23000ಕ್ಕೂ ಹೆಚ್ಚು ಮೀನುಗಾರರಿಗೆ ವಿಶೇಷವಾಗಿ ಮಹಿಳಾ ಮೀನುಗಾರರಿಗೆ ಪ್ರಯೋಜನವಾಗಲಿದೆ. ನೇಕಾರರ 98 ಕೋಟಿ ರೂ. ಸಾಲ ಮನ್ನಾ ಮಾಡಲು ಯೋಜಿಸಲಾಗಿದ್ದು, 29000 ಕ್ಕೂ ಹೆಚ್ಚು ನೇಕಾರರಿಗೆ ಪ್ರಯೋಜನವಾಗಲಿದೆ. ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು 5 ಲಕ್ಷ ರೂ.ಗಳ ಆರ್ಥಿಕ ನೆರವು ಒದಗಿಸಲಾಗುತ್ತಿದೆ ಇಂತಹ ಹಲವಾರು ಮಾಹಿತಿಗಳನ್ನು ಗ್ರಾಮಸ್ಥರಿಗೆ ತಿಳಿಸಲಾಗುವುದು.

ಗ್ರಾಮ ಸೇವೆ ನಡೆಯಲಿರುವ ಕೂತಗಾನಹಳ್ಳಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಗ್ರಾಮದ ಸ್ಥಳೀಯ ಸಂಘಟನೆಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಕ್ರಮಗಳ ಪ್ರಚಾರ ಹಾಗೂ ಅರಿವು ಮೂಡಿಸಲಾಗುವುದು.

Key words: ramanagar- village stays – information – government programs