ಮೈಸೂರು,ನ,23,2019(www.justkannada.in): ಮೈಸೂರಿನ ಎನ್.ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಎಸ್.ಡಿ.ಪಿ.ಐ ನ ಅಧ್ಯಕ್ಷ ಇಲಿಯಾದ್ ಮಹಮದ್ ತುಂಬ್ಡೆ ಆಗ್ರಹಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಇಲಿಯಾದ್ ಮಹಮದ್ ತುಂಬ್ಡೆ ,ಹಲ್ಲೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಐವರು ಆರೋಪಿಗಳನ್ನು ಅವರ ಕುಟುಂಬ ಸದಸ್ಯರು ಭೇಟಿ ಮಾಡಲು ತೆರಳಿದಾಗ, ಅವರನ್ನು ಭೇಟಿ ಮಾಡಲು ಕುಟುಂಬ ಸದಸ್ಯರಿಗೆ ನಿರಾಕರಿಸಲಾಗಿದೆ. ಈ ಬಗ್ಗೆ ಜೈಲಧಿಕಾರಿಗಳನ್ನು ವಕೀಲರು ಪ್ರಶ್ನಿಸಿದಾಗ, ತಮ್ಮ ಮೇಲೆ ಭಾರೀ ಒತ್ತಡ ಇದೆ ಎಂದು ಹೇಳಿದ್ದಾರೆ. ಇದನ್ನು ನೋಡಿದರೆ ಈ ಘಟನೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಕೆಲವರಿಂದ ಹುನ್ನಾರ ನಡೆದಿದೆ ಎಂದು ಹೇಳಿದರು.
ಪೋಲೀಸರಿಗೆ ಎಲ್ಲಾ ವಿಚಾರಗಳು ಗೊತ್ತಿವೆ. ಆದರೂ ಪೊಲೀಸರು ಮಾಧ್ಯಮಗಳ ಮುಂದೆ ಏಕೆ ಅಧಿಕೃತವಾಗಿ ಬಹಿರಂಗ ಹೇಳಿಕೆಗಳನ್ನು ನೀಡುತ್ತಿಲ್ಲ? ಪೊಲೀಸರು ಹೇಳಿಕೆ ನೀಡದಂತೆ ಯಾರು ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ? ಎಂದು ಇಲಿಯಾಸ್ ಮಹಮದ್ ಪ್ರಶ್ನಿಸಿದರು.
ಉಪ ಚುನಾವಣೆಯಲ್ಲಿ ಎಸ್.ಡಿ.ಪಿ.ಐ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ರಾಜ್ಯದಲ್ಲಿ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಎಸ್.ಡಿ.ಪಿ.ಐ ಬೆಳೆಯುತ್ತಿದೆ. ಇದನ್ನು ಸಹಿಸವರು ನಮಗೆ ಜನಬೆಂಬಲ ಕಡಿಮೆ ಮಾಡುವ ಸಲುವಾಗಿ ನಮ್ಮ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಗೃಹ ಸಚಿವರು ಕೂಡ ನಮ್ಮ ವಿರುದ್ದ ಹೇಳಿಕೆ ನೀಡಿದ್ದಾರೆ ಇಲಿಯಾಸ್ ಮಹಮದ್ ದೂರಿದರು.
ತನಿಖೆಯ ಹಂತದಲ್ಲಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಮಾತನಾಡಲಿ- ಅಬ್ದುಲ್ ಮಜೀದ್
ಎಸ್.ಡಿ.ಪಿ.ಐ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ, ಹಲ್ಲೆ ಪ್ರಕರಣ ತನಿಖೆಯ ಹಂತದಲ್ಲಿರುವಾಗ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಮಾತನಾಡಬೇಕು. ತಮಗನಿಸಿದಂತೆ ಹೇಳಿಕೆಗಳನ್ನು ನೀಡಬಾರದು. ಫರ್ಹಾನ್ ಪಾಷಾ ಮೂರು ಪಕ್ಷಗಳಲ್ಲಿ ಕೆಲಸ ಮಾಡಿದ್ದಾನೆ. ಅಧಿಕಾರ ದುರುಪಯೋಗ ಮಾಡಿಕೊಂಡು ನಮ್ಮ ಸಂಘಟನೆಯ ಬಲ ಕುಗ್ಗಿಸಲು ಹೊರಟರೇ ಮತ್ತೆ ಬೀದಿಗಿಳಿಯುತ್ತೇವೆ. ಈ ಹಿಂದೆ ಮಾಡಿರುವಂತೆ ಉಗ್ರ ಹೋರಾಟ ಮಾಡುತ್ತೇವೆ. ಅಗತ್ಯ ಬಿದ್ದರೆ ಜೈಲುಭರೋ ಚಳುವಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹಲ್ಲೆ ಪ್ರಕರಣದ ಸಂಬಂಧ ಪೊಲೀಸರು ಬಂಧಿಸಿರುವ ಆರೋಪಿಗಳ ಪೈಕಿ ಇಬ್ಬರು ಎಸ್.ಡಿ.ಪಿ.ಐ ಕಾರ್ಯಕರ್ತರಿದ್ದಾರೆ. ಪ್ರಕರಣರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವ ಬಗ್ಗೆ ಅನುಮಾನವಿದೆ. ಆರೋಪಿಗಳನ್ನು ಅನಗತ್ಯವಾಗಿ ಸಿಲುಕಿಸುವ ಹುನ್ನಾರ ನಡೆದಿದೆ. ಆದರೆ ನಮ್ಮ ಪಕ್ಷವನ್ನು ಟಾರ್ಗೆಟ್ ಮಾಡಿರುವ ಬಿಜೆಪಿ ಉಪ ಚುನಾವಣೆಯಲ್ಲಿ ಮತಗಳ ಧ್ರುವೀಕರಣ ಮಾಡಲು ಹೊರಟಿದೆ. ತನ್ನ ಲಾಭಕ್ಕಾಗಿ ಬಳಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.
Key words: Tanveer Seth –assult case-willing – advantage- SDPI President- Iliad Mohamed Tupde …