ಮಂಡ್ಯ:ಮೇ-18:(www.justkannada.in) ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದ್ದು ಈ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಫಲಿತಾಂಶದ ದಿನವಾದ ಮೇ 23 ಹಾಗೂ ಮೇ 24ರಂದು ಮಂಡ್ಯ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಪಿ.ಸಿ.ಜಾಫರ್ ಆದೇಶ ಹೊರಡಿಸಿದ್ದಾರೆ.
ಮೇ 23ರ ಬೆಳಗ್ಗೆ 6 ಗಂಟೆಯಿಂದ 24ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಮತ ಎಣಿಕೆ ದಿನ ಗೆದ್ದ ಅಭ್ಯರ್ಥಿಗಳು ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗುವುದು. ಸೋತ ಅಭ್ಯರ್ಥಿಗಳ ಮುಂದೆ ಘೋಷಣೆ ಕೂಗಿ ಪಟಾಕಿ ಸಿಡಿಸುವುದು ಸೇರಿದಂತೆ ಯಾವುದೇ ಪ್ರಚೋದನೆ ನೀಡುವಂತಹ ಘಟನೆ ನಡೆಯಬಾರದೆಂದು ಸೂಚನೆ ನಿಡಿದ್ದಾರೆ.
ಫಲಿತಾಂಶದ ದಿನದಂದು ಅಶಾಂತಿ ಮೂಡಿಸುವ, ಹಲ್ಲೆ ಮಾಡುವ, ಮನೆಗಳ ಮೇಲೆ ಕಲ್ಲು ತೂರುವ ಸಾಧ್ಯತೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಆರ್ಪಿಸಿ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮೇ 23ರ ಬೆಳಗ್ಗೆ 6 ಗಂಟೆಯಿಂದ 24ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ಸ್ಥಳದಲ್ಲಿ ಕೂಡ ಗೆದ್ದ ಅಭ್ಯರ್ಥಿ ಬೆಂಬಲಿಗರು ವಿಜಯೋತ್ಸವ ಆಚರಿಸುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಪರಾಜಿತರ ಮುಂದೆ ಘೋಷಣೆ ಕೂಗುವಂತಿಲ್ಲ.