ಬೆಂಗಳೂರು:ಮೇ-19:(www.justkannada.in) ಲೋಕಸಭಾ ಚುನಾವಣೆ ಅಂತಿಮ ಹಂತದ ಮತದಾನದ ಜತೆಗೆ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಸಿ.ಎಸ್.ಶಿವಳ್ಳಿ ನಿಧನದಿಂದ ತೆರವಾದ ಕುಂದಗೋಳ, ಉಮೇಶ್ ಜಾಧವ್ ರಾಜೀನಾಮೆಯಿಂದ ಖಾಲಿಯಾದ ಚಿಂಚೋಳಿ ಕ್ಷೇತ್ರಕ್ಕೆ ಬೆಳಿಗ್ಗೆ 7 ಗಂಟೆ ಮತದಾನ ಆರಂಭವಾಗಿದೆ.
ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿ ಕುಸುಮಾ ಶಿವಳ್ಳಿ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ್ ಸೇರಿದಂತೆ 8 ಜನ ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. 214 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಇದರಲ್ಲಿ ಸೂಕ್ಷ್ಮ 33 ಹಾಗೂ ಅತಿ ಸೂಕ್ಷ್ಮ 38 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ.
ಚಿಂಚೋಳಿ ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಬಡಾ ತಾಂಡದ ಮತಗಟ್ಟೆ ಸಂಖ್ಯೆ 165ರಲ್ಲಿ ಕುಟುಂಬ ಸಮೇತ ಬಂದು ಮತಚಲಾಯಿಸಿದರು. ಇನ್ನು ಕ್ಷೇತ್ರದ ಬೆಡಸೂರ್ನ ಮತಗಟ್ಟೆ ಸಂಖ್ಯೆ 79ರಲ್ಲಿ ಡಾ. ಉಮೇಶ್ ಜಾಧವ್ ಹಾಗೂ ಚಿಂಚೋಳಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಪತ್ನಿಯೊಂದಿಗೆ ಬಂದು ಮತಚಲಾಯಿಸಿದರು.
ಕುಂದಗೋಳ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ್ ಅವರು ಮತಚಲಾವಣೆಗೂ ಮುನ್ನ ಅದರಗುಂಚಿ ಗ್ರಾಮದ ದೊಡ್ಡೊಪ್ಪ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.
ಚಿಂಚೋಳಿ ಕುಂಚಾವರಂ ಮತಗಟ್ಟೆ ಸಂಖ್ಯೆ 35ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷದಿಂದ 20 ನಿಮಿಷ ಮತದಾನಕ್ಕೆ ಅಡಚಣೆಯಾಯಿತು. ಕೋಡ್ಲಿಯ ಉರ್ದು ಶಾಲೆ ಮತಗಟ್ಟೆಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದ ಮತದಾನ ಸ್ಥಗಿತಗೊಂಡಿದೆ.
ಇನ್ನು ಬೆಳಿಗ್ಗೆ 9 ಗಂಟೆವರೆಗೆ ಕುಂದಗೋಳದಲ್ಲಿ ಶೇ. 9.59 ರಷ್ಟು ಮತದಾನವಾಗಿದ್ದರೆ, ಚಿಂಚೋಳಿಯಲ್ಲಿ ಶೆ. 7.88ರಷ್ಟು ಮತದಾನವಾಗಿದೆ.