ಬೆಂಗಳೂರು, ಡಿ.13,2019(www.justkannada.in): ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ವಿಚಾರದಲ್ಲಿ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ, ನಾಲ್ಕು ತಿಂಗಳಿನಿಂದ ಏನ್ ಕೆಲಸ ಮಾಡಿದ್ದೀರಿ..? ಇನ್ನ ವಾರದೊಳಗೆ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದಿದ್ದರೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂದು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಚರ್ಚಿಸಿದರು. ಈ ವೇಳೆ ನೆರೆ ಪರಿಹಾರ ವಿಳಂಬಕ್ಕೆ ಕಾರಣ ಹೇಳಿದ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಸಿಎಂ ಬಿಎಸ್ ಯಡಿಯೂರಪ್ಪ, ನಾಲ್ಕು ತಿಂಗಳಿನಿಂದ ನೀವು ಏನು ಕೆಲಸ ಮಾಡಿದ್ದೀರಿ. ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಳ್ಳಲು 1 ಲಕ್ಷ ರೂ. ಹಣ ನೀಡಲಾಗಿದೆ. ಆದರೆ ಸಂತ್ರಸ್ತರು ಇನ್ನು ಮನೆ ನಿರ್ಮಿಸಿಕೊಳ್ಳಲು ಆರಂಭಿಸಿಲ್ಲ. ಅಂತವರ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ನೀಡಿ. ಒಂದು ವಾರದಲ್ಲಿ ಪ್ರಗತಿ ವರದಿ ನೀಡಬೇಕು. ಹಾಗೆಯೇ ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಆಧಾರ್ ಕಾರ್ಡ್ ಇಲ್ಲದವರಿಗೆ ಚೆಕ್ ಮೂಲಕ ಪರಿಹಾರ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರನ್ನು ನಿಗದಿತ ಅವಧಿಯಲ್ಲಿ ಭೇಟಿ ಮಾಡಬೇಕು. ಅವರ ಕಷ್ಟಗಳಿಗೆ ಸ್ಪಂದಿಸಬೇಕು. ಸರ್ಕಾರದ ಅನುದಾವನ್ನು ಕಾಲಮಿತಿಯಲ್ಲಿ ಖರ್ಚು ಮಾಡಬೇಕು. ಜಾರಿಯಲ್ಲಿರುವ ಯೋಜನೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಇಲ್ಲದೇ ಹೋದರೆ ಸೋಮಾರಿ ಅಧಿಕಾರಿಗಳನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಮುಖ್ಯಕಾರ್ಯದರ್ಶಿ ಒಂದು ತಿಂಗಳಿಗೊಮ್ಮೆ ಒಂದು ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಬೇಕು. ಕಾರ್ಯದರ್ಶಿಗಳು 15 ದಿನಗಳಿಗೊಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಹಾಗೆಯೇ ಅಧಿಕಾರಿಗಳು ಆಡಳಿತ ಯಂತ್ರ ಬಿಗಿ ತರಬೇಕು. ಯಾವುದೇ ಗೊಂದಲಕ್ಕೆ ಒಳಗಾಗದೇ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಿಎಂ ಬಿಎಸ್ ವೈ ತಿಳಿಸಿದರು.
Key words: flood victims-cm –bs yeddyurappa-class- officer- meeting