ಬೆಂಗಳೂರು,ಡಿ,18,2019(www.justkannada.in): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ತಾಯಿ ಗೌರಮ್ಮರನ್ನ ಅವರ ಕನಕಪುರ ನಿವಾಸದಲ್ಲೇ ವಿಚಾರಣೆ ನಡೆಸುವಂತೆ ಇಡಿ ಅಧಿಕಾರಿಗಳಿಗೆ ಹೈಕೋರ್ಟ್ ಆದೇಶ ನೀಡಿದೆ.
ಪ್ರಕರಣ ಸಂಬಂಧ ಇಡಿ ಸಮನ್ಸ್ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ತಾಯಿ ಗೌರಮ್ಮ ಅರ್ಜಿ ಸಲ್ಲಿಸಿದ್ದರು. ತಾವು ಇಡಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಬದಲಿಗೆ ತಮ್ಮ ಪರವಾಗಿ ಪ್ರತಿನಿಧಿ ಕಳುಹಿಸಲು ಇಲ್ಲವೇ ಸ್ವಗೃಹದಲ್ಲಿ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ಗೌರಮ್ಮ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ಪೀಠ, ಗೌರಮ್ಮ ಅವರ ವಿಚಾರಣೆಯನ್ನ ಕನಕಪುರ ನಿವಾಸದಲ್ಲಿ ನಡೆಸಬೇಕು. ವಿಚಾರಣೆಯನ್ನು ಕನ್ನಡದಲ್ಲೆ ನಡೆಸುವುದರ ಜೊತೆಗೆ, ವಿಚಾರಣೆಯ ಧ್ವನಿ ಮುದ್ರಣ ಮಾಡುವಂತೆ ನ್ಯಾಯಪೀಠ ಸೂಚನೆ ನೀಡಿದೆ.
ಹಾಗೆಯೇ ವಿಚಾರಣೆ ವೇಳೆ ಇಡಿ ಅಧಿಕಾರಿಗಳಿಗೆ ಅಡ್ಡಿಪಡಿಸಬಾರದು ಮತ್ತು ಪ್ರತಿಭಟನೆ ನಡೆಸಬಾರದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ. ಜತೆಗೆ ಇ.ಡಿ.ಅಧಿಕಾರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಪೀಠ ನಿರ್ದೇಶಿಸಿದೆ.
Key words: Illegal money transfers. Case- High Court –ED- DK Sivakumar’s- mother- Gauramma -Kanakapura residence.