ಮೈಸೂರು,ಡಿ,25,2019(www.justkannada.in): ಉನ್ನತ ಶ್ರೇಣಿಯಲ್ಲಿ ಪಾಸಾಗಿ ಐಎಎಸ್,ಐಪಿಎಸ್ ಅಧಿಕಾರಿಯಾಗಬೇಕೆಂಬ ಹಂಬಲ ಹೊತ್ತವರು ಗುರಿ ತಲುಪುವುದು ವಿರಳ. ಆದರೆ, ಹಿಡಿದ ಹಠ ಸಾಧಿಸಿಯೇ ತೀರಬೇಕೆಂಬ ಮಹಾದಾಸೆ ಹೊತ್ತಿದ್ದರ ಫಲವಾಗಿ ಮೈಸೂರಿನ ಕುವರಿಯೊಬ್ಬಳು ಕೆಎಎಸ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದು, ಮುಂದೆ ಐಎಎಸ್ ಪಾಸಾಗುವ ಕನಸು ಹೊತ್ತಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಸಚಿವ ಪ್ರೊ.ಆರ್.ರಾಜಣ್ಣ- ಸಹಾಯಕ ಕಾರ್ಯಪಾಲಕ ಅಭಿಯಂತರ ಪಿ.ಆರ್.ಸುಜಾತ ಅವರ ಪುತ್ರಿ ಅನುಷಾರಾಣಿ ಈಗ ಕೆಎಎಸ್ ನ ಪ್ರಥಮ ರ್ಯಾಂಕ್ ಮುಡಿಗೇರಿಸಿಕೊಂಡಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿರುವ ಪಟ್ಟಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಮೈಸೂರುನಗರಕ್ಕೆ ಹೆಮ್ಮೆ ತಂದಿದ್ದಾಳೆ. ಇದೀಗ ಮುಂದೆ ನಡೆಯುವ ಐಎಎಸ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದು ಉನ್ನತ ಹುದ್ದೆಗೇರುವ ಕನಸು ಹೊತ್ತು ಕೂತಿರುವುದು ವಿಶೇಷ.
ನಾನು ಮೈಸೂರಿನ ಕೇಂದ್ರೀಯ ವಿದ್ಯಾಲಯದಲ್ಲಿ ಸಿಬಿಎಸ್ಸಿ ಪಠ್ಯಕ್ರಮ ಅಭ್ಯಾಸ ಮಾಡಿದ್ದರಿಂದ ಕನ್ನಡ ಓದಲು ಅಷ್ಟಾಗಿ ಬರುತ್ತಿರಲಿಲ್ಲ. ಆದರೆ, ಕೆಎಎಸ್ ಪರೀಕ್ಷೆಯಲ್ಲಿ ಕನ್ನಡವೂ ಒಂದು ಭಾಗವಾಗಿದ್ದರಿಂದ ಕಷ್ಟವಾಗುತ್ತದೆ ಅಂತ ಅನ್ನಿಸಿತ್ತು. ಆದರೆ, ನನ್ನ ಸ್ನೇಹಿತರ ಸಹಕಾರ, ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರ ಸಹಕಾರ, ಪ್ರೋತ್ಸಾಹದಿಂದ ನನಗೆ ಎದುರಿಸಲು ನೆರವಾಯಿತು ಎಂದರು. ನವದೆಹೆಲಿಯಿಂದ ಮೈಸೂರಿಗೆ ಬಂದಾಗ 2014ರಲ್ಲಿ ಕೆಎಎಸ್ ಪರೀಕ್ಷೆ ತೆಗೆದುಕೊಂಡಿದ್ದೆ. ಪ್ರಿಲಿಮನರಿ ಹಂತದಲ್ಲಿ ಉತ್ತೀರ್ಣಳಾಗಿ ಮುಖ್ಯ ಪರೀಕ್ಷೆಯಲ್ಲಿ ಸಫಲವಾಗದೆ ಹೋದೆ. ಇದರಿಂದ ಮತ್ತಷ್ಟು ತರಬೇತಿ ಪಡೆದುಕೊಳ್ಳಬೇಕೆಂದು ಸವಾಲಾಗಿ ಸ್ವೀಕರಿಸಿ ಮುಂದಿನ ಹೆಜ್ಜೆ ಇಟ್ಟಿದ್ದೆ. ಇದಕ್ಕೆ ನನ್ನ ಪೋಷಕರು ಸಂಪೂರ್ಣ ಸಹಕಾರ ನೀಡಿದರು. ಮನೆಯ ಸಮಸ್ಯೆಗಳು ಏನಿದ್ದರೂ ನಾನು ಮಾನಸಿಕವಾಗಿ ವಿಚಲಿತರಾಗದೆ ಎಚ್ಚರಿಕೆಯಿಂದ ನೋಡಿಕೊಂಡರು. ಇದರಿಂದ ಪರೀಕ್ಷೆ ಪೂರ್ವ ತಯಾರಿ ಮಾಡಿಕೊಳ್ಳುವುದರಲ್ಲಿ ಯಾವುದೇ ಒತ್ತಡ ಉಂಟಾಗಲಿಲ್ಲ ಎಂದು ಮೆಲುಕು ಹಾಕಿದರು.
ಮೊದಲ ಬಾರಿ ಕೆಎಎಸ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರಿಂದ ಮತ್ತೊಮ್ಮೆ ಕೆಎಎಸ್ ಪರೀಕ್ಷೆ ತೆಗೆದುಕೊಳ್ಳುವಷ್ಟರಲ್ಲಿ ಎಸ್ಡಿಸಿ,ಎಫ್ಡಿಸಿ,ಪಿಐಟಿಐ ಪರೀಕ್ಷೆಗಳನ್ನು ಹಂತ ಹಂತವಾಗಿ ಎದುರಿಸಿದ್ದರಿಂದ ಸಾಕಷ್ಟು ಅನುಕೂಲ, ಅನುಭವ ದೊರೆಯಿತು ಎಂದು ಹೇಳಿಕೊಂಡರು. ಮುಂದೆ ಐಎಎಸ್ ಅಧಿಕಾರಿಯಾಗಬೇಕೆಂಬ ಹಂಬಲ ಹೊಂದಿದ್ದೇನೆ. ಈಗ ನಾನು ಬೆಂಗಳೂರಿನ ಕಮರ್ಷಿಯಲ್ ಟ್ಯಾಕ್ಸ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮುಂದೆ ಐಎಎಸ್ ಪಾಸಾದರೆ ಜನರ ಸೇವೆಮಾಡುವ ಹಂಬಲ ಹೊಂದಿದ್ದೇನೆ ಎಂದರು.
Key words: mysore- girl- Rank- kas