ಮೈಸೂರು, ಜನವರಿ,18,2020(www.justkannada.in): ಐತಿಹಾಸಿಕ ಪಂಚಲಿಂಗ ದರ್ಶನ ಮಹೋತ್ಸವವು 2020ನೇ ವರ್ಷಾಂತ್ಯದಲ್ಲಿ ಜರುಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಶುಕ್ರವಾರ ತಲಕಾಡು ಸಮೂಹ ದೇವಾಲಯಗಳ ಸ್ಥಳ ಪರಿಶೀಲಿಸಿ ಪೂರ್ವಭಾವಿ ಸಭೆ ನಡೆಸಲು ಮಾಹಿತಿ ಸಂಗ್ರಹಿಸಿದರು.
ಏಳು ವರ್ಷಗಳ ನಂತರ ನಡೆಯುತ್ತಿರುವ ಪಂಚಲಿಂಗ ದರ್ಶನವು ಡಿಸೆಂಬರ್ 14 ರಿಂದ ಹತ್ತು ದಿನಗಳ ಕಾಲ ನಡೆಯಲಿದ್ದು, ಆಗಮಿಸುವ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಮೂಲಭೂತ ಸೌಕರ್ಯಗಳನ್ನು ಹಾಗೂ ಕಾಮಗಾರಿಗಳನ್ನು ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಮುಖಂಡರ ಜೊತೆ ಚರ್ಚಿಸಲಾಯಿತು.
ದೇಶ ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಅನುಕೂಲವಾಗುವಂತಹ ಸಾರಿಗೆ ವ್ಯವಸ್ಥೆ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಶಾಶ್ವತವಾಗಿ ನಿರ್ಮಾಣ ಮಾಡಬೇಕು. ಅಲ್ಲದೆ ಹದಗೆಟ್ಟಿರುವ ರಸ್ತೆಗಳನ್ನು ದುರಸ್ಥಿಗೊಳಿಸಿ ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಕಾಮಗಾರಿ ನಡೆಸಬೇಕು.
ಮುಡುಕುತೊರೆ ಕಾವೇರಿ ನದಿ ತೀರದಲ್ಲಿ ವೈಜ್ಞಾನಿಕವಾದ ಸೋಪಾನ ಕಟ್ಟೆ ನಿರ್ಮಿಸಬೇಕು ಹಾಗೂ ಸ್ವಚ್ಛತೆಗೆ ಆಧ್ಯತೆ ನೀಡಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ವಹಿಸಬೇಕು. ಪಂಚಲಿಂಗ ದರ್ಶನಕ್ಕೆ ಒಳಪಡುವ ದೇವಾಲಯಗಳ ಜಿರ್ಣೊದ್ಧಾರ, ಅನೇಕ ಕಡೆ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಸ್ಥಳೀಯ ಮುಖಂಡರು ಒಕ್ಕೊರಿನಿಂದ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಾಸಕರಾದ ಅಶ್ವಿನ್ಕುಮಾರ್ ಮಾತನಾಡಿ, ಪಂಚಲಿಂಗ ದರ್ಶನ ಮಹೋತ್ಸವವು ವಿಜೃಂಭಣೆಯಿಂದ ಜರಗುವಂತೆ ಅಗತ್ಯ ಕ್ರಮಗಳನ್ನು ಅನುಸರಿಸಲಾಗುವುದು. ಅಲ್ಲದೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಹೇಳಿದರು.
ತಲಕಾಡು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಮತ್ತಷ್ಟು ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಲಾಗುವುದು ಎಂದು ಭರವಸೆ ನೀಡಿದರು.
ನಂತರ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಾತನಾಡಿ, ಪಂಚಲಿಂಗ ದರ್ಶನಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಮೂಲಭೂತ ಸೌಲಭ್ಯ ಸೇರಿದಂತೆ ಅಗತ್ಯವಿರವ ಎಲ್ಲಾ ಬಗೆಯ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು. ಪಂಚಲಿಂಗ ದರ್ಶನ ಉತ್ಸವಕ್ಕೆ ಅಗತ್ಯವಿರುವ ಸಹಕಾರ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಂಬಂಧಿಸದ ಇಲಾಖೆಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಮೈಸೂರು ಉಪ ವಿಭಾಗಾಧಿಕಾರಿ ಡಾ.ಎನ್.ಸಿ.ವೆಂಕಟರಾಜು, ಡಿ.ವೈ.ಎಸ್.ಪಿ.ಪ್ರಭಾಕರ್ ರಾವ್ ಸಿಂಧೆ, ಇನ್ಸ್ಪೆಕ್ಟರ್ ಎಂ.ಆರ್.ಲವ, ಸಬ್ ಇನ್ಸ್ಪೆಕ್ಟರ್ ಬಿ.ಬಸವರಾಜು, ತಹಶಿಲ್ದಾರ್ ನಾಗೇಶ್, ಜಿಲ್ಲಾ ಪಂಚಾಯತಿ ಸದಸ್ಯರಾದ ಮಂಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಉಮೇಶ್, ಸದಸ್ಯರಾದ ಕುಕ್ಕೂರು ಗಣೇಶ್, ಶಿವಮ್ಮ ನಾಗಯ್ಯ, ತಲಕಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತಾ ವಿಜಯಕುಮಾರ್, ವೈಧ್ಯನಾಥೇಶ್ವರ ದೇವಾಲಯ ಸಮೂಹಗಳ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ ಮೂರ್ತಿ, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Key words: Panchalinga Darshan Mahotsav – December 14th-inspection -Mysore DC-Abhiram Ji Shankar.