ಮೈಸೂರು,ಜ,18,2020(www.justkannada.in): ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್ –ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ತಸ್ಲೀಂ ಆಯ್ಕೆಯಾಗಿದ್ದಾರೆ.
ಇಂದು ಮೈಸೂರು ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ತಸ್ಲೀಂ ಅವರು ಮೈಸೂರು ಪಾಲಿಕೆಯ 22ನೇ ಅವಧಿಗೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಯಶ್ವಂತ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.
ಮೇಯರ್ ಚುನಾವಣಾಕಣದಲ್ಲಿ ಮೈತ್ರಿ ಪಕ್ಷದಿಂದ ತಸ್ಲೀಂ ಹಾಗೂ ಬಿಜೆಪಿಯಿಂದ ಗೀತಾಶ್ರೀ ಯೋಗಾನಂದ್ ಇದ್ದರು. ತಸ್ಲೀಮ್ ಪರ ಮತಯಾಚಿಸುವವರು ಕೈ ಎತ್ತುವಂತೆ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದರು. ಈ ವೇಳೆ ತಸ್ಲೀಂ ಪರ ಜೆಡಿಎಸ್ ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರು ಕೈ ಎತ್ತಿದರು. ನಾಲ್ಕು ವಿಧಾನ ಪರಿಷತ್ ಸದಸ್ಯರು ಹಾಗೂ ಶಾಸಕ ಜಿ.ಟಿ .ದೇವೇಗೌಡ ಮತ ಚಲಾವಣೆ ಮಾಡಿದರು. ಮೇಯರ್ ಪುಷ್ಪಲತಾ ಹಾಗೂ ಉಪಮೇಯರ್ ಶಫಿ ಅಹಮ್ಮದ್ ಕೂಡಾ ತಸ್ಲೀಂ ಅವರಿಗೆ ಮತ ಚಲಾಯಿಸಿದರು. ಇನ್ನು ಚುನಾವಣೆಯಲ್ಲಿ ಶಾಸಕ ತನ್ವೀರ್ ಸೇಠ್ ಗೈರಾಗಿದ್ದರು.
ಬಿಜೆಪಿ ಅಭ್ಯರ್ಥಿ ಗೀತಾಶ್ರೀ ಯೋಗಾನಂದ್ ಪರ 21 ಸದಸ್ಯರು ಮತಚಲಾವಣೆ ಮಾಡಿದರು. ಶಾಸಕ ಎಲ್.ನಾಗೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಮಾವಿ.ರಾಮ್ ಪ್ರಸಾದ್ ರಿಂದಲೂ ಕೈ ಎತ್ತುವ ಮೂಲಕ ಬಿಜೆಪಿ ಅಭ್ಯರ್ಥಿ ಗೀತಾಶ್ರೀ ಯೋಗಾನಂದ್ ಪರ ಮತ ಚಲಾವಣೆ ಮಾಡಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮೇಯರ್ ಅಭ್ಯರ್ಥಿ ತಸ್ಲೀಂಗೆ 47ಮತಗಳು ಚಲಾವಣೆಯಾದವು. ಬಿಜೆಪಿ ಅಭ್ಯರ್ಥಿ ಗೀತಾಶ್ರೀ ಯೋಗಾನಂದ್ ಗೆ 23ಮತಗಳು ಚಲಾವಣೆಯಾದವು. ಈ ಮೂಲಕ ನಿರಾಯಾಸವಾಗಿ ಮೈತ್ರಿ ಅಭ್ಯರ್ಥಿ ತಸ್ಲೀಂ ಮೇಯರ್ ಸ್ಥಾನ ಗೆದ್ದರು.
Key words: Tasneem -elected – mayor – Mysore City corporation