ಬೆಂಗಳೂರು:ಮೇ-23: ರಾಜ್ಯದಾದ್ಯಂತ ಪೂರ್ವ ಮುಂಗಾರು ಆರ್ಭಟ ಮುಂದುವರಿದಿದ್ದು, ಸಿಡಿಲಿಗೆ ಮತ್ತೆ ಐವರು ಬಲಿಯಾಗಿದ್ದಾರೆ.
ಬುಧವಾರ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗಿದ್ದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡೊಂಕಮಡು ಗ್ರಾಮದ ರೇಣುಕಾ ಶಿವರಾಯಪ್ಪ ಕೂಡ್ಲಗಿ (35), ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದ ಕರೆಪ್ಪ ವಿಠ್ಠಲ ಹಿರೇಕುರುಬರ (27) ಹಾಗೂ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್ ಯರಕಿಹಾಳ ಗ್ರಾಮದ ರೈತ ಸೋಮಣ್ಣ ಬಿರಾದಾರ(32) ಸಿಡಿಲಿಗೆ ಬಲಿಯಾಗಿದ್ದಾರೆ. ಕಲಬುರಗಿಯ ಸೇಡಂ ತಾಲೂಕಿನ ಕಾನಗಡ್ಡಾದಲ್ಲಿ ಬಿರುಗಾಳಿಗೆ ತಾತ್ಕಾಲಿಕವಾಗಿ ನಿರ್ವಿುಸಿಕೊಂಡಿದ್ದ ಮನೆ ಉರುಳಿ ಮನೆಯಲ್ಲಿದ್ದ ರಾಜೇಶ್ವರಿ ರವಿಕುಮಾರ (32), ಸಮೃದ್ಧ ರೆಡ್ಡಿ (12) ಮೃತಪಟ್ಟಿದ್ದಾರೆ.
ಮಲೆನಾಡಲ್ಲಿ ಮಳೆ ಚುರುಕು: ಕೊಡಗು ಜಿಲ್ಲೆಯ ಹಲವೆಡೆ ಜೋರು ಮಳೆಯಾಗಿದ್ದು, ಕೆಲವೆಡೆ ಅಪಾರ ಹಾನಿಯಾಗಿದೆ. ಕುಶಾಲನಗರದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಮರ ಉರುಳಿಬಿದ್ದು, ಕುಶಾಲನಗರ- ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರಕ್ಕೆ ತೊಡಕಾಗಿತ್ತು. ಹಾಸನ ಜಿಲ್ಲೆಯ ಅರಕಲಗೂಡು ಸೇರಿ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ. ಸೋಮವಾರಪೇಟೆ ತಾಲೂಕಿನ ಚಿಕ್ಕನಾಯಕನಹೊಸಳ್ಳಿಯಲ್ಲಿ ಸಿಡಿಲಿಗೆ ರಂಗಶೆಟ್ಟಿ ಅವರ 10 ಕುರಿಗಳು ಮೃತಪಟ್ಟಿವೆ. ಶಿವಮೊಗ್ಗ ಜಿಲ್ಲೆಯ ಆಯನೂರು, ಕುಂಸಿ ಭಾಗದಲ್ಲಿ, ಶಿಕಾರಿಪುರದ ಈಸೂರಿನಲ್ಲಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಸಿಡಿಲಬ್ಬರದ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣ ಹಾಗೂ ಸುತ್ತಮುತ್ತಲಿನ ವಿವಿಧ ಗ್ರಾಮಗಳಲ್ಲಿ ಮಂಗಳವಾರ ಇಡೀ ರಾತ್ರಿ ಭಾರಿ ಮಳೆ ಸುರಿದಿದೆ. ಮೊದಲ ಮಳೆಯಲ್ಲೇ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅಥಣಿ ತಾಲೂಕಿನ ಸಂಬರಗಿ, ತೆಲಸಂಗ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಗಾಳಿ, ಮಳೆಯ ಅಬ್ಬರ ಇತ್ತು. ವಿಜಯಪುರ ಜಿಲ್ಲೆಯಲ್ಲಿ ಬುಧವಾರ ಸಂಜೆ ಹಾಗೂ ರಾತ್ರಿ ವೇಳೆ ಕೆಲ ಕಾಲ ಮಳೆ ಸುರಿದಿದೆ.
ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ನಿರೀಕ್ಷೆ
ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮೇ 23ರಿಂದ 27ರವರೆಗೆ ಭಾರಿ ಮಳೆ ನಿರೀಕ್ಷಿಸಲಾಗಿದೆ. ದಟ್ಟ ಮೋಡಗಳ ಸಾಲು(ಟ್ರಫ್)ಗಳಿಂದಾಗಿ ಪೂರ್ವ ಮುಂಗಾರು ಚುರುಕಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬುಧವಾರ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಬಿದ್ದಿದ್ದು, ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ ಆಗಿದೆ.
ಸಿಡಿಲು ಬಡಿದು ಜಾನುವಾರು ಸಾವು
ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೆ.ಕೋಡಿಹಳ್ಳಿ ತಾಂಡಾದದಲ್ಲಿ ಮಂಗಳವಾರ ರಾತ್ರಿ ಸಿಡಿಲು ಬಡಿದು ಹನುಮಂತಪ್ಪ ಅವರ 13 ಮೇಕೆಗಳು ಸತ್ತಿವೆ. ಕುರುಗೋಡು ತಾಲೂಕಿನ ಬಸರಕೋಡು ಗ್ರಾಮದಲ್ಲಿ ಮಳೆಯಿಂದಾಗಿ 10ಕ್ಕೂ ಹೆಚ್ಚು ಬೃಹತ್ ಮರಗಳು, 10 ವಿದ್ಯುತ್ ಕಂಬಗಳು ಧರೆಗುರುಳಿದ್ದು, 2 ಮನೆಗಳ ತಗಡಿನ ಶೀಟ್ ಗಾಳಿಗೆ ಹಾರಿವೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದೇವಿಕ್ಯಾಂಪ್ನ ಮನೆಯೊಂದರ ಶೆಡ್ ಬಿರುಗಾಳಿಗೆ ಕಿತ್ತು ಹೋಗಿದೆ.
ಕೃಪೆ:ವಿಜಯವಾಣಿ