ಮೈಸೂರು,ಫೆ,6,2020(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ಶೋಷಿತ ಸಮುದಾಯದವರನ್ನ ಕಡೆಗಣಿಸಲಾಗಿದೆ. ಬಿಜೆಪಿ ಸರ್ಕಾರದ ಭವಿಷ್ಯಕ್ಕೆ ಮುಂಬರುವ ದಿನಗಳಲ್ಲಿ ಇದೇ ಮಾರಕವಾಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.
ಮೈಸೂರಿನ ಸುತ್ತೂರು ಮಠಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ಈ ವೇಳೆ ಹೆಚ್.ಡಿಕೆಗೆ ಸುತ್ತೂರು ಮಠದಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಬಳಿಕ ಹೆಚ್.ಡಿ ಕುಮಾರಸ್ವಾಮಿ ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಆಶಿರ್ವಾದ ಪಡೆದು ಶ್ರೀಗಳ ಕುಶಲೋಪರಿ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿದರು. ಮಾಜಿ ಸಿಎಂ ಕುಮಾರಸ್ವಾಮಿಗೆ ಮಾಜಿ ಸಚಿವ ಸಾರಾ ಮಹೇಶ್, ಮೇಯರ್ ತಸ್ನೀಂ ಸೇರಿ ಹಲವರು ಸಾಥ್ ನೀಡಿದರು.
ಬಳಿಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಹಿಂದೆ ಸಂಪುಟದಲ್ಲಿ ಎಲ್ಲಾ ಸಮಾಜದವರಿಗೆ ಸಮಾನ ಅವಕಾಶ ಕೊಡಲಾಗುತ್ತಿತ್ತು. ಆದರೆ ಈಗ ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗಕ್ಕೆ ಅವಕಾಶ ಸಿಕ್ಕಿಲ್ಲ. ಜತೆಗೆ ಸಣ್ಣ ಪುಟ್ಟ ಜಾತಿಯವರಿಗೆ ಅವಕಾಶ ಇಲ್ಲದಂತಾಗಿದೆ. ಅ ಅವಕಾಶ ಸಿಗದ ಅಸಮಾಧಾನಿತರು ಇದ್ದಾರೆ. ಮುಂದೆ ಇದೇ ಬಿಜೆಪಿಯವರಿಗೆ ಮುಳುವಾಗಬಹಯದು ಎಂದು ಹೇಳಿದರು.
ಇವತ್ತಿನ ಬೆಳವಣಿಗೆ ನೋಡಿದಾಗ ಇದು ಜನಾಭಿಪ್ರಾಯದಿಂದ ನಡೆಯುತ್ತಿರುವ ಸರ್ಕಾರ ಅಲ್ಲ. ಬಿಜೆಪಿ ಹೈಕಮಾಂಡ್ ಒಲವು ಕೂಡ ಈ ರಾಜ್ಯ ಸರ್ಕಾರಕ್ಕೆ ಇಲ್ಲ. ಬಿಜೆಪಿ ಅಸಮಾಧಾನಿಗರು ಯಾರು ನನ್ನ ಭೇಟಿ ಮಾಡಿಲ್ಲ. ಅವರ ಅವಶ್ಯಕತೆ ಕೂಡ ನನಗಿಲ್ಲ ಎಂದು ಹೆಚ್.ಡಿಕೆ ನುಡಿದರು.
ಅನರ್ಹರಿಗೆ ಸಚಿವ ಸ್ಥಾನದಿಂದ ತೃಪ್ತಿ ಸಿಕ್ಕಿದೆಯಾ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ತೃಪ್ತಿ ಸಿಕ್ಕಿದೆಯಾ ಅಂತ ಪಕ್ಷಾಂತರಿಗಳನ್ನು ಕೇಳಿ. ಈ ಸರ್ಕಾರ ಸ್ಥಿರ ಸರ್ಕಾರ ಅಲ್ಲ, ಯಾವತ್ತಾದರೂ ಈ ಸರ್ಕಾರ ಬೀಳಬಹುದು. ಈ ಸರ್ಕಾರ ಉಳಿಯುತ್ತೊ ಇಲ್ಲವೋ ಅಂತ ಹೇಳಲು ಭವಿಷ್ಯ ಹೇಳಲು ನಾನು ಕೋಡಿ ಮಠದ ಸ್ವಾಮಿ ನಾನಲ್ಲ ಎಂದು ಲೇವಡಿ ಮಾಡಿದರು.
ಹೆಚ್.ಡಿ.ಕೆಗೆ ಸೀರಿಯಸ್ ನೆಸ್ ಇಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕೆ, ಮನೆ ಹಾಳು ಮಾಡುವಷ್ಟು ಸೀರಿಯಸ್ ನೆಸ್ ನನಗಿಲ್ಲ ಎಂದು ತಿರುಗೇಟು ನೀಡಿದರು.
ಮಾಜಿ ಸಚಿವ ಹೆಚ್.ವಿಶ್ವನಾಥ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಹೆಚ್.ಡಿ ಕುಮಾರಸ್ವಾಮಿ, ಎಚ್. ವಿಶ್ವನಾಥ್ ಬಗ್ಗೆ ಚರ್ಚೆ ಮಾಡುವ ಅಗತ್ಯ ನನಗಿಲ್ಲ. ಮೈತ್ರಿ ಸರ್ಕಾರ ತೆಗೆಯಲೇಬೇಕೆಂದು ಬಿಜೆಪಿಗೆ ಹೋದೆವು ಅಂತಾ ಹೇಳಿದ್ದಾರೆ. ಮೈತ್ರಿ ಸರ್ಕಾರ ತೆಗೆದು ಒಳ್ಳೆಯ ಸಾಧನೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಚರಿತ್ರೆಯಲ್ಲಿ ಬರೆಯುತ್ತಾರೆ. ಯಾರಿಗೆ ಪ್ರೇರೇಪಣೆ ನೀಡಲು ವಿಶ್ವನಾಥ್ ಪುಸ್ತಕ ಬರೆಯುತ್ತಾರೋ ಗೊತ್ತಿಲ್ಲ ಎಂದು ನುಡಿದರು.
ಸರ್ಕಾರದಲ್ಲಿ ಯಾವಾಗ ಬೇಕಾದರೂ ಅನಾಹುತಗಳಾಗಬಹುದು. ಯಾವಾಗ ಬೇಕಾದರು ಚುನಾವಣೆ ಬಂದರೂ ಎದುರಿಸಲು ನಮ್ಮ ಪಕ್ಷ ಸಿದ್ದವಿದೆ. ಚುನಾವಣೆಯಿಂದ ಹಿಂದೆ ಸರಿಯುವ ಮಾತೆ ಇಲ್ಲ. ಚುನಾವಣ ಹೋರಾಟಕ್ಕೆ ಜೆಡಿಎಸ್ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಹೆಚ್ಡಿಕೆ ತಿಳಿಸಿದರು.
Key words: mysore- suttur math- former cm hd kumaraswamy- Ignoring -exploited community