ಪರಿಹಾರವೇ ಸಮಸ್ಯೆಯಾದಾಗ!: ದಾರಿ ಯಾವುದಯ್ಯಾ ಸಂಚಾರಕೆ

ಬೆಂಗಳೂರು:ಮೇ-25: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ ಸಂಚರಿಸಬೇಕು. ಟ್ರಾಫಿಕ್‌ ನಿವಾರಣೆಗಾಗಿ ಅಲ್ಲಿ ನಿರ್ಮಿಸಿದ ತೂಗು ಸೇತುವೆಯಿಂದಲೇ ಈಗ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಕೆ.ಆರ್‌.ಪುರದ ಟಿನ್‌ಫ್ಯಾಕ್ಟರಿ ಜಂಕ್ಷನ್‌ ಬಳಿ ಅವೈಜ್ಞಾನಿಕವಾಗಿ ತೂಗುಸೇತುವೆ ನಿರ್ಮಿಸಿರುವುದು ಸಮಸ್ಯೆಗೆ ಕಾರಣ. ರಾಜಧಾನಿ ಬೆಂಗಳೂರಿನಿಂದ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಹಳೇ ಮದ್ರಾಸ್‌ ರಸ್ತೆಯಲ್ಲಿ ನಿತ್ಯ ಉಂಟಾಗುತ್ತಿದ್ದ ವಾಹನಗಳ ದಟ್ಟಣೆಗೆ ತಾತ್ಕಾಲಿಕ ಪರಿಹಾರವಾಗಿ ಒಂದೂವರೆ ದಶಕದ ಹಿಂದೆ ಸುಮಾರು 125 ಕೋಟಿ ರೂ. ವೆಚ್ಚದಲ್ಲಿ ಟಿನ್‌ ಫ್ಯಾಕ್ಟರಿಯಿಂದ ಐಟಿಐ ಕಾಲೊನಿವರೆಗೆ (1.5 ಕಿ.ಮೀ) ತೂಗು ಸೇತುವೆ ನಿರ್ಮಿಸಲಾಗಿದೆ. ಇದೀಗ ಆ ಸೇತುವೆಯಿಂದಲೇ ಸಂಚಾರದಟ್ಟಣೆ ಅಧಿಕವಾಗಿರುವುದು ಮಾತ್ರವಲ್ಲದೆ, ಪರ್ಯಾಯ ಮಾರ್ಗಕ್ಕೂ ಅಡ್ಡಿಯಾಗಿದೆ.

ವಾಹನಗಳ “ಕತ್ತರಿ’ ಸಂಚಾರ: ನಗರದಿಂದ ಹೊರ ರಾಜ್ಯಗಳಿಗೆ ಹಳೇ ಮದ್ರಾಸ್‌ ರಸ್ತೆ ಮೂಲಕ ಹೋಗುವ ವಾಹನಗಳು ಹಾಗೂ ಹೆಬ್ಟಾಳದಿಂದ ಐಟಿ-ಬಿಟಿ ಕಂಪನಿಗಳಿರುವ ವೈಟ್‌ಫೀಲ್ಡ್‌, ಮಾರತ್‌ಹಳ್ಳಿ, ಮಹದೇವಪುರ ಹಾಗೂ ಐಟಿಪಿಎಲ್‌ ಕಡೆಗೆ ತೆರಳುವ ವಾಹನಗಳು ಟಿನ್‌ ಫ್ಯಾಕ್ಟರಿ ಜಂಕ್ಷನ್‌ನಿಂದಲೇ ಹಾದುಹೋಗಬೇಕು. ಮತ್ತೂಂದೆಡೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶದ ವಾಹನಗಳು ಕೂಡ ಇದೇ ಹೆದ್ದಾರಿ ಮೂಲಕ ಬೆಂಗಳೂರು ನಗರ ಪ್ರವೇಶಿಸುತ್ತವೆ ಇದರಿಂದ ಭಾರೀ ಸಂಚಾರ ದಟ್ಟಣೆ ಉಂಟಾಗುತ್ತದೆ.

ಅಲ್ಲದೆ, ನಗರದಿಂದ ಹೋಗುವ ವಾಹನಗಳು ರೈಲು ನಿಲ್ದಾಣದತ್ತ ಹೋಗಲು ಸೇತುವೆ ಬಳಿ ಎಡ ತಿರುವು ಪಡೆದು ಸರ್ವೀಸ್‌ ರಸ್ತೆಯಲ್ಲಿ ಚಲಿಸಬೇಕು. ಇನ್ನು ಹೆಬ್ಟಾಳದಿಂದ ನೆರೆ ರಾಜ್ಯ ಅಥವಾ ಕೆ.ಆರ್‌. ಪುರ ಕಡೆ ತೆರಳಲು ಬಲತಿರುವು ಪಡೆದು ಸೇತುವೆ ಏರಬೇಕು. ಹೀಗೆ ಕತ್ತರಿ ಆಕಾರದಲ್ಲಿ ವಾಹನಗಳು ಸಂಚರಿಸುವುದರಿಂದ ಈ ಜಂಕ್ಷನ್‌ನಲ್ಲಿ ನಿರೀಕ್ಷೆಗೂ ಮೀರಿದ ವಾಹನದಟ್ಟಣೆ ಇರುತ್ತದೆ.

ಸಂಚಾರ ಪೊಲೀಸರ ಮಾಹಿತಿ ಪ್ರಕಾರ ಈ ಜಂಕ್ಷನ್‌ನಲ್ಲಿ ಪ್ರತಿ ಗಂಟೆಗೆ 30-35 ಸಾವಿರ ವಾಹನಗಳು ಓಡಾಡುತ್ತವೆ. “ಪಿಕ್‌ ಅವರ್‌’ನಲ್ಲಿ ವಾಹನಗಳ ಸಂಖ್ಯೆ ದುಪ್ಪಟ್ಟಾಗಲಿದ್ದು, ನಿತ್ಯ ಆರು ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಅಲ್ಲದೆ, ಈ ರಸ್ತೆಯಲ್ಲಿ ಒಂದು ನಿಮಿಷ ವಾಹನಗಳು ನಿಂತರೆ ಕನಿಷ್ಠ 500 ಮೀಟರ್‌ ಸಂಚಾರ ದಟ್ಟಣೆ ಉಂಟಾಗುತ್ತಿದೆ. ವಾರಾಂತ್ಯದಲ್ಲಿ ಒಮ್ಮೊಮ್ಮೆ ಸಂಜೆ ವೇಳೆ ಟ್ರಾಫಿಕ್‌ ಜಾಮ್‌ ಉಂಟಾದರೆ, ಅದನ್ನು ತೆರವುಗೊಳಿಸಲು ತಡರಾತ್ರಿ 1ರಿಂದ 2 ಗಂಟೆ ಆಗುತ್ತದೆ ಎನ್ನುತ್ತಾರೆ ಸಂಚಾರ ಪೊಲೀಸರು.

ವೇಗಮಿತಿ ಬಹಳ ಕಡಿಮೆ: ಮೆಜೆಸ್ಟಿಕ್‌ನಿಂದ ಟಿನ್‌ ಫ್ಯಾಕ್ಟರಿಗೆ ಇರುವ ದೂರ 14 ಕಿ.ಮೀ. ಇದನ್ನು ಕ್ರಮಿಸಲು ಪೀಕ್‌ ಅವರ್‌ನಲ್ಲಿ ಕನಿಷ್ಠ ಎರಡು ತಾಸು ಆಗುತ್ತದೆ. ಉಳಿದ ಸಮಯದಲ್ಲಿ 45 ನಿಮಿಷ ಸಾಕು. ಮೆಜೆಸ್ಟಿಕ್‌ನಿಂದ ಗಂಟೆಗೆ 40 ಕಿ.ಮೀ. ವೇಗದಲ್ಲಿ ಹೋಗುವ ವಾಹನದ ವೇಗ, ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣ ತಲುಪುತ್ತಿದ್ದಂತೆ ಗಂಟೆಗೆ 15 ಕಿ.ಮೀ.ಗೆ ಕುಸಿಯುತ್ತದೆ.

67 ಮೀ. ಇರಬೇಕಾದ್ದು 30 ಅಡಿ ಇದೆ!: ಟಿನ್‌ಫ್ಯಾಕ್ಟರಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ-4 ಎಂದು ಸಹ ಕರೆಯಲಾಗುತ್ತದೆ. ನಿಯಮದ ಪ್ರಕಾರ ರಾಷ್ಟ್ರೀಯ ಹೆದ್ದಾರಿಯ ಅಗಲ 67 ಮೀಟರ್‌ ಇರಬೇಕು (ಈ ಮೊದಲು 30 ಮೀ. ಇರಬೇಕು ಎಂದಿತ್ತು). ಆದರೆ, ಟಿನ್‌ ಫ್ಯಾಕ್ಟರಿ ರಸ್ತೆಯ ಅಗಲ 30 ಅಡಿ ಮಾತ್ರ. ಕಿಷ್ಕಿಂದೆಯಂತಿರುವ ಈ ರಸ್ತೆಯಲ್ಲಿ ಒಮ್ಮೆಲೆ ಸಾವಿರಾರು ವಾಹನಗಳು ನುಗ್ಗಿದಾಗ, ಸಹಜವಾಗಿಯೇ ಸಂಚಾರ ನಿರ್ವಹಣೆ ಸವಾಲಿನ ಕೆಲಸವಾಗುತ್ತದೆ ಎಂದು ಸಂಚಾರ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಮೆಟ್ರೋ ಬಂದ್ರೂ ಗೋಳು ತಪ್ಪದು?: ಮೆಟ್ರೋ ಎರಡನೇ ಹಂತದ ಹೆಚ್ಚುವರಿ ಕಾಮಗಾರಿಯಲ್ಲಿ ಸಿಲ್ಕ್ಬೋರ್ಡ್‌ನಿಂದ ಕೆ.ಆರ್‌.ಪುರ ಹಾಗೂ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಮಾರ್ಗ ಸೂಚಿಸಲಾಗಿತ್ತು. ಆದರೆ, ಕೆ.ಆರ್‌.ಪುರದ ಇಎಸ್‌ಐ ಬಳಿ ಜಾಗ ಸಿಗದ ಹಿನ್ನೆಲೆಯಲ್ಲಿ ಸದ್ಯ ನಿರ್ಮಾಣವಾಗುತ್ತಿರುವ ಕಾಮಗಾರಿಯಿಂದ ಮಹದೇವಪುರ, ವೈಟ್‌ಫೀಲ್ಡ್‌ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಬಹದು.

ಆದರೆ, ಹಳೆಯ ಮದ್ರಾಸ್‌ ರಸ್ತೆ, ಟಿನ್‌ ಫ್ಯಾಕ್ಟರಿ ಬಳಿ ಸಂಚಾರ ಸಮಸ್ಯೆ ಮುಂದುವರಿಯಲಿದೆ. ಕಾರಣ, ಕೆ.ಆರ್‌.ಪುರದವರು ಐಟಿಪಿಎಲ್‌ ಕಡೆ ಹೋಗಲು ಹೂಡಿ ಬಳಿಯ ನಿಲ್ದಾಣಕ್ಕೆ, ಟಿನ್‌ ಫ್ಯಾಕ್ಟರಿ ಬಳಿಯಿರುವ ಲೌರಿ ಮೆಮೋರಿಯಲ್‌ ಶಾಲೆ ಬಳಿ ನಿರ್ಮಿಸುತ್ತಿರುವ ನಿಲ್ದಾಣ ತಲುಪಲು ಕನಿಷ್ಠ 30 ನಿಮಿಷ ಬೇಕಾಗುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಟ್ರಾಫಿಕ್‌ ಸಮಸ್ಯೆ ಜತೆಗೆ ಪಾರ್ಕಿಂಗ್‌ ಸಮಸ್ಯೆ ಕೂಡ ಎದುರಾಗಬಹುದು ಎಂದು ಸಂಚಾರ ಪೊಲೀಸರು ಸ್ಪಷ್ಟಪಡಿಸುತ್ತಾರೆ.

ಪರ್ಯಾಯ ಮಾರ್ಗವೇನು?
-ಟಿನ್‌ ಫ್ಯಾಕ್ಟರಿ ರಸ್ತೆ ವಿಸ್ತರಣೆ
-ಸಾರ್ವಜನಿಕರು ರಸ್ತೆ ದಾಟಲು ಸುರಂಗ ಮಾರ್ಗ ಅಥವಾ ಮತ್ತೂಂದು ಸ್ಕೈವಾಕ್‌ ನಿರ್ಮಾಣ
-ಟಿನ್‌ ಫ್ಯಾಕ್ಟರಿ ಬಳಿಯಿರುವ ಬಸ್‌ ನಿಲ್ದಾಣ ಸ್ಥಳಾಂತರ ಮಾಡುವುದು
-ಟಿನ್‌ ಫ್ಯಾಕ್ಟರಿಯಿಂದ ರೈಲು ನಿಲ್ದಾಣ ಕಡೆಗಿನ ಸರ್ವೀಸ್‌ ರಸ್ತೆ ವಿಸ್ತರಣೆ

ಯೋಜನೆ ನನೆಗುದಿಗೆ: ಈ ಹಿಂದೆ ಟಿನ್‌ ಫ್ಯಾಕ್ಟರಿ ಬಳಿ ಬಿಎಂಟಿಸಿ ಸೇರಿ ಇತರೆ ಬಸ್‌ಗಳ ನಿಲ್ದಾಣಕ್ಕೆ “ಬಸ್‌ ಬೇ’ ಹಾಗೂ 110 ಕೋಟಿ ರೂ. ವೆಚ್ಚದಲ್ಲಿ ಹಳೇ ಮದ್ರಾಸ್‌ ರಸ್ತೆಯಲ್ಲಿ ಸಿಗ್ನಲ್‌ ಮುಕ್ತ ಕಾರಿಡಾರ್‌ ಯೋಜನೆಯಡಿ 110 ಕೋಟಿ ರೂ. ವೆಚ್ಚದಲ್ಲಿ ಗ್ರೇಡ್‌ ಸಪರೇಟರ್‌ ನಿರ್ಮಾಣ ಹಾಗೂ ಬಿಡಿಎ ಎಲಿವೇಟೆಡ್‌ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಆದರೆ ಇದುವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

ಟಿನ್‌ ಫ್ಯಾಕ್ಟರಿ ಬಳಿ ಹೆಚ್ಚಾಗಿರುವ ಸಂಚಾರ ನಿಯಂತ್ರಣಕ್ಕೆ ರಸ್ತೆ ವಿಸ್ತರಣೆ ಹಾಗೂ ಹೆಚ್ಚುವರಿಯಾಗಿ ಬಸ್‌ ನಿಲ್ದಾಣ ನಿರ್ಮಿಸುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ.
-ಜಗದೀಶ್‌, ಪೂರ್ವ ಸಂಚಾರ ವಿಭಾಗದ ಡಿಸಿಪಿ
ಕೃಪೆ:ಉದಯವಾಣಿ

ಪರಿಹಾರವೇ ಸಮಸ್ಯೆಯಾದಾಗ!: ದಾರಿ ಯಾವುದಯ್ಯಾ ಸಂಚಾರಕೆ
Bangalore-the-solution-is-the-problem