ಮೈಸೂರು,ಫೆ,28,2020(www.justkannada.in): ಕಳೆದ 2016ರಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಮೈಸೂರು ವಿಶ್ವವಿದ್ಯಾನಿಲಯ ಮತ್ತೊಂದು ಮೈಲಿಗಲ್ಲಿನತ್ತ ಹೆಜ್ಜೆ ಇಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ ಶತಮಾನೋತ್ಸವ ಘಟಿಕೋತ್ಸವ ಸಂಭ್ರಮವನ್ನು ಆಚರಿಸುವ ಹೊಸ್ತಿಲಿನಲ್ಲಿ ಬಂದು ನಿಂತಿದೆ.
ಮುಂದಿನ ದಿನಗಳಲ್ಲಿ ನಡೆಯಲಿರುವ ಶತಮಾನೋತ್ಸವ ಘಟಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷವಾಗಿ ತಯಾರಾಗಿರುವ ಲಾಂಛನವನ್ನು ಬಿಡುಗಡೆ ಮಾಡಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಘಟಿಕೋತ್ಸವ ಲಾಂಛನವನ್ನು ಲೋಕಾರ್ಪಣೆಗೊಳಿಸಿದರು. ಶತಮಾನೋತ್ಸವ ಲಾಂಛನವನ್ನು ವಿನ್ಯಾಸಗೊಳಿಸಿದ್ದ ಪ್ರಮೋದಾದೇವಿ ಒಡೆಯರ್ ಅವರೇ ಘಟಿಕೋತ್ಸವದ ಲಾಂಛನವನ್ನ ವಿನ್ಯಾಸಗೊಳಿಸಿದ್ದರು. ರಾಜ್ಯದ ಮೊದಲ ವಿವಿ ಎಂಬ ಹೆಗ್ಗಳಿಕೆಯ ಜತೆಗೆ ಶತಮಾನೋತ್ಸವ ಘಟಿಕೋತ್ಸವ ಆಚರಿಸುತ್ತಿರುವುದು ಮೊದಲಾಗಿದೆ. ಹಾಗಾಗಿ,ಈ ಅವಿಸ್ಮರಣೀಯ ಸಮಾರಂಭದ ಹಿನ್ನೆಲೆಯಲ್ಲಿ ವಿನ್ಯಾಸಗೊಳಿಸಿರುವ ಲಾಂಛನದಲ್ಲಿ ಎಡಕ್ಕೆ ವಿವಿಯ ವೇದವಾಕ್ಯ, ಬಲದ ಮಧ್ಯದಲ್ಲಿ ಶತಮಾನದ ಇಸವಿ, ಶತಮಾನ ಘಟಿಕೋತ್ಸವ, ಕೆಳಗೆ ಮೈಸೂರು ವಿಶ್ವವಿದ್ಯಾನಿಲಯದ ಹೆಸರು ಕಾಣಿಸುತ್ತದೆ.
ವಿನ್ಯಾಸಗೊಳಿಸಿದ್ದಕ್ಕೆ ಸಂತಸ ತಂದಿದೆ:
ಲಾಂಛನ ಬಿಡುಗಡೆಗೊಳಿಸಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾತನಾಡಿ, ನನಗೆ ವಿವಿಯ ಹಳೆಯ ವಿದ್ಯಾರ್ಥಿ ನಿಎನ್ನುವುದಕ್ಕೆ ತುಂಬಾ ಹೆಮ್ಮೆಯಾಗುತ್ತದೆ. ನಮ್ಮ ಪೂರ್ವಜರಾದ ನಾಲ್ವಡಿಕೃಷ್ಣರಾಜ ಒಡೆಯರ್ ಸ್ಥಾಪಿಸಿದ ವಿವಿಯಲ್ಲಿ ಮಾವನವರಾದ ಜಯಚಾಮರಾಜ ಒಡೆಯರ್ ಐದು, ನಮ್ಮ ಯಜಮಾನರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೂರು ಚಿನ್ನದ ಪದಕ ಪಡೆದಿದ್ದರುಎಂದು ಹೇಳಿದರು. ನಾನು ಹಳೆಯ ವಿದ್ಯಾರ್ಥಿನಿಯಾಗಿದ್ದರಿಂದಲೇ ನನಗೂ-ಈ ವಿವಿಗೂ ಅವಿನಾಭಾವ ಸಂಬಂಧ. ಶತಮನೋತ್ಸವ ಲಾಂಛನ ಮಾಡಿದ್ದೆ. ಈಗ ಘಟಿಕೋತ್ಸವ ಲಾಂಛನದ ವಿನ್ಯಾಸ ಬೇಕೆಂದು ಕೇಳಿಕೊಂಡಿದ್ದರಿಂದ ಖುಷಿಯಿಂದಲೇ ಮಾಡಿಕೊಟ್ಟಿರುವೆ. ಇಂದು ಅತ್ಯಂತ ಸಂತೋಷದ ದಿನವಾಗಿದೆ ಎಂದರು.ನನಗೆ ಪೈಂಟಿಂಗ್,ಫ್ಯಾಷನ್ ಡಿಸೈನಿಂಗ್ ನಲ್ಲಿ ಆಸಕ್ತಿಇರುವುದರಿಂದ ಲಾಂಛನವನ್ನ ವಿಶೇಷವಾಗಿ ವಿನ್ಯಾಸಮಾಡಿದ್ದೇನೆ. ಘಟಿಕೋತ್ಸವದ ಅರ್ಥವನ್ನು ಈ ಲಾಂಛನದಲ್ಲಿ ತಿಳಿಯಬಹುದುಎಂದು ನುಡಿದರು.
ತಾಂತ್ರಿಕ ಕಾಲೇಜು ಸ್ಥಾಪನೆಗೆ ನೀಲನಕ್ಷೆ…
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ಕಳೆದ 2016ರಲ್ಲಿ ಪ್ರೊ.ಕೆ.ಎಸ್.ರಂಗಪ್ಪ ಕುಲಪತಿಯಾಗಿದ್ದಾಗ ಶತಮಾನೋತ್ಸವ ಸಂಭ್ರಮ ಆಚರಿಸಲಾಗಿದ್ದು,ಈಗ ಶತಮಾನೋತ್ಸವ ಘಟಿಕೋತ್ಸವ ಆಚರಿಸುವ ಹೊಣೆ ನನ್ನ ಪಾಲಿಗೆ ಬಂದಿರುವುದು ಸುದೈವವಾಗಿದೆಎಂದರು.ಶತಮಾನೋತ್ಸವ ಘಟಿಕೋತ್ಸವಕ್ಕೆ ದೊಡ್ಡ ಗಣ್ಯಮಹನೀಯರೊಬ್ಬರನ್ನ ಆಹ್ವಾನಿಸಲು ಮಾತುಕತೆ ನಡೆಸಿ ಸಿದ್ಧತೆ ಮಾಡಲಾಗುತ್ತಿದೆ. ಈ ಸಮಾರಂಭಕ್ಕೆ ಬರುವ ಆಶಾಭಾವನೆ ಇದೆ ಎಂದರು. ಮೈಸೂರು ವಿವಿಯಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆ ಮಾಡುವ ಕುರಿತಂತೆ ನೀಲನಕ್ಷೆ ಸಿದ್ಧವಾಗಿದೆ. ವಸ್ತು ಸಂಗ್ರಹಾಲಯದಕೆಲಸವೂ ನಡೆಯುತ್ತಿದೆ. ವಿವಿಯ 456ವಿಭಾಗಗಳು,ಹತ್ತಕ್ಕೂ ಹೆಚ್ಚುಪೀಠಗಳು ರಚನಾತ್ಮಕವಾಗಿ ತನ್ನ ಕಾರ್ಯ ನಿರ್ವಹಿಸಿ ಹೊಸ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಹಾಗಾಗಿ,ಘಟಿಕೋತ್ಸವವು ದಾಖಲೆಯಾಗಿ ಉಳಿಯುವಂತೆ ಮಾಡಲು ಸಿದ್ಧತೆ ಆರಂಭಿಸಲಾಗಿದೆ ಎಂದರು. ಘಟಿಕೋತ್ಸವದ ಲಾಂಛನವನ್ನ ವಿನ್ಯಾಸಗೊಳಿಸಿಕೊಡುವಂತೆ ರಾಜಮಾತೆ ಅವರಲ್ಲಿ ಕೇಳಿದಾಗ ಸಂತೋಷದಿಂದ ಒಪ್ಪಿ ಮಾಡಿಕೊಟ್ಟಿದ್ದಾರೆ. ಈ ವಿವಿಗೆ ಯದುವಂಶದ ಕೊಡುಗೆ ಅಪಾರವಾಗಿದೆಎಂದು ಸ್ಮರಿಸಿದರು. ಘಟಿಕೋತ್ಸವದಲ್ಲಿ ಹಲವಾರು ಮಹನೀಯರು ಘಟಿಕೋತ್ಸವ ಭಾಷಣ ಮಾಡಿದ್ದರೆ, ಹಲವು ದಿಗ್ಗಜರಿಗೆ ಗೌರವ ಡಾಕ್ಟರೇಟ್ ಕೊಡಲಾಗುತ್ತಿದೆ. ಅದರಲ್ಲಿ ಪ್ರಮುಖವಾಗಿ ಡಾ.ರಾಜೇಂದ್ರಪ್ರಸಾದ್, ಅಶುತೋಷ್ ಮುಖರ್ಜಿ ಎಪಿಜೆ ಅಬ್ದುಲ್ ಕಲಾಂ, ಡಾ.ಮನಮೋಹನ್ ಸಿಂಗ್ ಹೀಗೆ ಹಲವಾರು ಮಂದಿ ಭಾಷಣ ಮಾಡಿದ್ದಾರೆ. ಹಾಗಾಗಿ, ಶತಮಾನೋತ್ಸವ ಘಟಿಕೋತ್ಸವದಲ್ಲಿ ಅತಿ ದೊಡ್ಡ ಗಣ್ಯ ವ್ಯಕ್ತಿಯನ್ನು ಆಹ್ವಾನಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಭಾರತೀಯ ವಿಜ್ಞಾನ ಸಂಸ್ಥೆ ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರೊ.ಉದಯ್ ಮೈತ್ರಾ ಆವರ್ತನ ಕೋಷ್ಟಕ ಮತ್ತು ನಾವು ಕುರಿತು ಉಪನ್ಯಾಸ ನೀಡಿದರು. ಕುಲಸಚಿವ ಪ್ರೊ.ಆರ್.ಶಿವಪ್ಪ ಇದ್ದರು.
key words: Mysore university- Centenary Convention-Logo –Released-pramodadevi wodeyar