ಮೈಸೂರು,ಮಾ,4,2020(www.justkannada.in): ಮೈಸೂರು ಜಿಲ್ಲೆ ಟೀ ನರಸೀಪುರ ತಾಲ್ಲೂಕಿನ ಬಟ್ಟಳಿಗೆ ಹುಂಡಿ ಗ್ರಾಮದಲ್ಲಿ ಬೆಳ್ಳಂಬೆಳಗ್ಗೆಯೇ ಚಿರತೆ ಸೆರೆಯಾಗಿದೆ.
ಹಲವು ದಿನಗಳಿಂದ ಕಾಣಿಸಿಕೊಂಡು ತುಂಬಲ ಗ್ರಾಮ ಪಂಚಾಯ್ತಿಯ ಬಟ್ಟಳಿಗೆ ಗ್ರಾಮದ ಜನರಲ್ಲಿ ಆತಂಕ ಸೃಷ್ಠಿಸಿದ್ದ ಚಿರತೆ ಇಂದು ಅರಣ್ಯ ಇಲಾಖೆ ಬೋನಿಗೆ ಬಿದ್ದಿದೆ. 2 ವರ್ಷದ ಗಂಡು ಚಿರತೆ ಹಲವು ದಿನಗಳಿಂದ ಬಟ್ಟಳಿಗೆ ಹುಂಡಿ ಗ್ರಾಮದ ಜನರಿಗೆ ಆಗಾಗೆ ಕಾಣಿಸಿಕೊಂಡು ಭೀತಿ ಹುಟ್ಟಿಸಿತ್ತು.
ಈ ನಡುವೆ ಗ್ರಾಮದ ಮಹದೇವ್ ರವರ ಮನೆ ಹತ್ತಿರ ಬೋನು ಇರಿಸಲಾಗಿತ್ತು. ಇದೀಗ ಚಿರತೆ ಸೆರೆಯಾಗಿದ್ದು ಸುತ್ತಮುತ್ತಲಿನ ಗ್ರಾಮದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ನೆನ್ನೆಯಷ್ಟೇ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಸಿಕ್ಕಿದ್ದವು.
ತುಂಬಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಕೆಲ ತಿಂಗಳುಗಳಿಂದ ಬೋನಿಗೆ ಬಿದ್ದಿರುವ ಆರನೇ ಚಿರತೆ ಇದು. ಇನ್ನು ಸ್ಥಳಕ್ಕೆ DRFO ಮಂಜುನಾಥ್ ಮತ್ತು ಸಿಬ್ಬಂದಿ ಆಗಮಿಸಿದ್ದು ಸುರಕ್ಷಿತವಾಗಿ ಚಿರತೆಯನ್ನ ಸ್ಥಳಾಂತರಿಸಿದ್ದಾರೆ.
Key words: mysore-t. Narsipur- Leopard-forest department