ಮೈಸೂರು, ಮಾ.04, 2020 : ( www.justkannada.in news ) : ಕೆಲ ದಿನಗಳ ಹಿಂದೆ ಕನ್ನಡದ ವಿಶ್ವಸಾರ್ಹ ದಿನಪತ್ರಿಕೆ ‘ ಪ್ರಜಾವಾಣಿ’ಯಲ್ಲಿ ಪ್ರಕಟವಾದ ಸುದ್ಧಿಯೊಂದು ಗಮನ ಸೆಳೆದಿದೆ. ಈ ಸುದ್ಧಿ ಪ್ರಕಟಗೊಂಡ ಬೆನ್ನಲ್ಲೇ ಅಸಹಾಯಕ ಅಕ್ಕ ಮತ್ತು ತಮ್ಮನಿಗೆ ನೆರವಿನ ಮಹಾಪೂರವೇ ಹರಿದಿದೆ. ಮಾತ್ರವಲ್ಲದೆ, ಆ ಬಡ ಜೀವಿಗಳಿಗೆ ಉಜ್ವಲ ಭವಿಷ್ಯ ಕಟ್ಟಿಕೊಡಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಿದ್ದಾರೆ. ನಿಜಕ್ಕೂ ಮಾಧ್ಯಮದ ತಾಖತ್ತು ಅಂದ್ರೆ ಇದು.
ಕಳೆದ ವಾರ ಪ್ರಜಾವಾಣಿ ಪತ್ರಿಯ ಮೈಸೂರು ಆವೃತ್ತಿಯ ಮುಖಪುಟದಲ್ಲಿ ಮಾನವೀಯ ಸುದ್ಧಿಯೊಂದು ಪ್ರಕಟವಾಗಿತ್ತು. ಅದು ಪತ್ರಿಕೆ ಎಚ್.ಡಿ.ಕೋಟೆಯ ವರದಿಗಾರ ಸತೀಶ್ ಬಿ. ಆರಾಧ್ಯ ಎಂಬುವವರು ಸಂಗ್ರಹಿಸಿದ್ದ ಸುದ್ಧಿ. ಈ ಸುದ್ಧಿ ಓದುಗರನ್ನು ಗಾಢವಾಗಿ ತಟ್ಟಿತು. ಮಾತ್ರವಲ್ಲದೆ ಪತ್ರಿಕೆ ಓದುಗರು ಸಹಾಯಕ್ಕಾಗಿ ಮುಂದೆ ಬಂದರು. ಪರಿಣಾಮ ಈಗ ಅಸಹಾಯಕರಾಗಿದ್ದ ಎರಡು ಜೀವಗಳಿಗೆ ಆಸರೆ ಲಭಿಸಿದೆ.
ಏನಿದು ಸುದ್ಧಿ :
ತಂದೆ–ತಾಯಿಯನ್ನು ಕಳೆದುಕೊಂಡು, ಪಾರ್ಶ್ವವಾಯು ಪೀಡಿತ ಅಕ್ಕನ ಆರೈಕೆಗಾಗಿ ಶಾಲೆಯನ್ನೇ ತೊರೆದಿದ್ದ ಬಾಲಕ . ಎಚ್.ಡಿ.ಕೋಟೆ ತಾಲ್ಲೂಕಿನ ಆಲನಹಳ್ಳಿ ಗ್ರಾಮದ ಮಂಜುಳಾ–ಕುಮಾರ್ ದಂಪತಿಯ ಮಕ್ಕಳಾದ ಆಕಾಶ್(15), ಅನುಷಾ (17) . ಇವರ ಕರುಣಾಜನಕ ಸ್ಥಿತಿ ಬಗ್ಗೆ ಸತೀಶ್ ಬಿ. ಆರಾಧ್ಯ ವರದಿ ಮಾಡಿದ್ದರು.
ಆಕಾಶ್ 8ನೇ ತರಗತಿಯಲ್ಲಿ ಓದುತ್ತಿದ್ದಾಗ, ತಂದೆ ಅನಾರೋಗ್ಯದಿಂದ ನಿಧನರಾದರು. ಇದಾದ ಎರಡು ತಿಂಗಳಲ್ಲೇ ತಾಯಿಯೂ ಅಸುನೀಗಿದ್ದರು. ಅಕ್ಕನ ಆರೈಕೆ ಹಾಗೂ ಮನೆಯ ನಿರ್ವಹಣೆಗೆಂದು ಶಾಲೆ ಬಿಟ್ಟಿದ್ದ ಆಕಾಶ್, ಕೂಲಿ ಮಾಡುತ್ತಿದ್ದ. ಬಾಲಕನ ಸಂಕಷ್ಟದ ಕುರಿತಂತೆ ‘ಅಕ್ಕನ ಆರೈಕೆಗಾಗಿ ಶಾಲೆ ತೊರೆದ ತಮ್ಮ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಫೆ.27ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ಈ ಸುದ್ಧಿ ಪ್ರಕಟಗೊಂಡ ಮರುದಿನವೇ , ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳು ಸ್ಥಳಕ್ಕೆತೆರಳಿ ಅಸಾಹಯಕ ಮಕ್ಕಳ ಸ್ಥಿತಿ ಪರಿಶೀಲಿಸಿ ನೆರವು ನೀಡಿ, ಇಬ್ಬರಿಗೂ ಮೈಸೂರಿನಲ್ಲಿ ಪುನರ್ವಸತಿ ಕಲ್ಪಿಸಲು ವ್ಯವಸ್ಥೆ ಮಾಡಿದರು.
ಕೈ–ಕಾಲಿನ ಸ್ವಾಧೀನ ಕಳೆದುಕೊಂಡು, ಬುದ್ದಿಮಾಂದ್ಯಳಾಗಿರುವ ಅನುಷಾಳನ್ನು ಮೈಸೂರಿನ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ‘ಚಿಗುರು’ ಆಶ್ರಮಕ್ಕೆ ದಾಖಲಿಸಲಾಗಿದೆ. ಬಾಲಕ ಆಕಾಶ್ನನ್ನು ಮೈಸೂರಿನ ವಿಜಯನಗರದ ಬಾಲಕರ ಸರ್ಕಾರಿ ಬಾಲಮಂದಿರಕ್ಕೆ ಕಳುಹಿಸಿಕೊಡಲಾಗಿದೆ.
‘ಸೆರೆಬ್ರಲ್ ಪಾಲ್ಸಿ ಸಮಸ್ಯೆಯಿಂದ ಬಳಲುತ್ತಿರುವ ಅನುಷಾಳಿಗೆ, ತಾತ್ಕಾಲಿಕವಾಗಿ ಚಿಗುರು ಆಶ್ರಯ ಕೇಂದ್ರದಲ್ಲಿ ಆಶ್ರಯ ಕೊಡಿಸಲಾಗಿದ್ದು, ಕೆಲವೇ ದಿನಗಳಲ್ಲಿ ವೈದ್ಯಕೀಯ ಸೌಲಭ್ಯವಿರುವ ಕೇಂದ್ರಕ್ಕೆ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಭರವಸೆ ನೀಡಿದ್ದಾರೆ.
ಅದೇ ರೀತಿ, ಬಾಲಕರ ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ಪಡೆದಿರುವ ಆಕಾಶ್ ಗೆ , ಮುಂದಿನ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗಕ್ಕೆ ಅವಕಾಶ ಕಲ್ಪಿಸಿಕೊಡಲು ಬಾಲಮಂದಿರದ ಸಂಬಂಧಪಟ್ಟವರು ಮುಂದಾಗಿದ್ದಾರೆ. ಈ ಬೆಳವಣಿಗೆ ಅಕ್ಕ ಹಾಗೂ ತಮ್ಮನ ಮುಖದಲ್ಲಿ ಮಂದಹಾಸ ಮೂಡಿಸಿದೆ. ಭವಿಷ್ಯದ ಬಗ್ಗೆ ಇದ್ದ ಚಿಂತೆಯ ಕಾರ್ಮೋಡ ಸರಿದಿದೆ.
ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳ ಬಗ್ಗೆ ಜನರು ನಂಬಿಕೆ ಕಳೆದುಕೊಂಡಿದ್ದರು. ಕೇವಲ ಉಪೇಕ್ಷಿತ, ಅನಗತ್ಯ ಹಾಗೂ ಸ್ವಯಂ ಅನುಕೂಲಕರ ಸುದ್ಧಿಗಳಿಗೆ ಮಾತ್ರ ಆಧ್ಯತೆ ನೀಡಲಾಗುತ್ತಿದೆ ಎಂಬುದು ಓದುಗ ವಲಯದ ಆರೋಪ. ಜತೆಗೆ ವೃತ್ತಿ ಸಂಬಂಧಿತ ಕೆಲಸಗಳನ್ನು ಬದಿಗೊತ್ತಿ , ಪತ್ರಿಕಾ ಧರ್ಮ ಮರೆತು ಕೇವಲ ‘ ರೆವಿನ್ಯೂ- ರೆಸ್ಪಾನ್ಸ್ ‘ ನಲ್ಲೇ ಮುಳುಗಿರುವ ಈ ಕಾಲಘಟ್ಟದಲ್ಲಿ ಪ್ರಜಾವಾಣಿ ಪತ್ರಿಕೆಯ ಈ ವರದಿ ಜನರಲ್ಲಿ ಆಶಾಭಾವನೆ ಮೂಡಿಸಿದೆ. ಈ ನಿಟ್ಟಿನಲ್ಲಿ ಪ್ರಜಾವಾಣಿಗೊಂದು ‘ ಹ್ಯಾಟ್ಸ್ ಆಫ್ ‘
key words : mysore-media-journalist-human-reports-ethics-karnataka-prajavani