ಬೆಂಗಳೂರು:ಮೇ-27:ದಂಪತಿಯ ಅನೈತಿಕ ಸಂಬಂಧಕ್ಕೆ ಅವರ ಮಕ್ಕಳು ಬಲಿಯಾಗುತ್ತಿರುವ ಪ್ರಕರಣ ಹೆಚ್ಚುತ್ತಿದ್ದು, ಯಾರೋ ಮಾಡಿದ ತಪ್ಪಿಗೆ ಮುಗ್ದ ಕಂದಮ್ಮಗಳು ತೊಂದರೆ ಅನುಭವಿಸುವಂತಾಗಿದೆ. ಇಲ್ಲೊಂದು ಪ್ರಕರಣದಲ್ಲಿ ವಿವಾಹಿತೆ ಜತೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ, ಆಕೆಗೆ ತೆಳ್ಳಗಾಗಲು ಮಾತ್ರೆ ನೀಡುವುದಾಗಿ ನಂಬಿಸಿ ಮತ್ತು ಬರುವ ಮಾತ್ರೆ ನೀಡಿ ಆಕೆಯ 11 ತಿಂಗಳ ಮಗುವನ್ನು ಅಪಹರಿಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ರಾಮಮೂರ್ತಿನಗರದ ನಿವಾಸಿ ಜಾನ್ (35) ಮಗುವನ್ನು ಅಪಹರಿಸಿ ಪೊಲೀಸರಿಗೆ ಸಿಕ್ಕಿಬಿದ್ದ ಆರೋಪಿ. ಸದ್ಯ ಮಗುವನ್ನು ರಕ್ಷಣೆ ಮಾಡಿದ ಪೊಲೀಸರು ಪಾಲಕರ ಮಡಿಲು ಸೇರುವಂತೆ ಮಾಡಿದ್ದಾರೆ.
ಸುಂಕದಕಟ್ಟೆ ನಿವಾಸಿ ಕುಮಾರ್ ಎಂಬುವವರು ಖಾಸಗಿ ಕಂಪನಿಯಲ್ಲಿ ಸೂಪರ್ವೈಸರ್ ಆಗಿದ್ದು, ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ಸುಂಕದಕಟ್ಟೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ದಂಪತಿಗೆ 4 ವರ್ಷದ ಮಗಳು ಹಾಗೂ 11 ತಿಂಗಳ ಮಗನಿದ್ದಾನೆ. ಕುಮಾರ್ ಪತ್ನಿ, ಜಾನ್ ಎಂಬಾತನ ಜತೆ ಕೆಲ ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದಳು. ಪತಿ ಕಣ್ತಪ್ಪಿಸಿ ಆತನನ್ನು ಮನೆಗೆ ಕರೆದು ಸರಸ ಸಲ್ಲಾಪದಲ್ಲಿ ತೊಡಗುತ್ತಿದ್ದಳು ಎನ್ನಲಾಗಿದೆ.
ತೆಳ್ಳಗಾಗಲು ಮತ್ತುಬರುವ ಮಾತ್ರೆ ಕೊಟ್ಟ: ಮೇ 24ರಂದು ಬೆಳಗ್ಗೆ 9 ಗಂಟೆಗೆ ಕುಮಾರ್ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಸಂಜೆ 7 ಗಂಟೆಗೆ ಮನೆಗೆ ವಾಪಾಸಾದಾಗ ಪತ್ನಿ ಮಲಗಿದ್ದಳು. ಆದರೆ, 11 ತಿಂಗಳ ಮಗ ಮನೆಯಲ್ಲಿರಲಿಲ್ಲ. ಇದರಿಂದ ಆತಂಕಗೊಂಡ ಕುಮಾರ್ ಮನೆ ಅಕ್ಕ-ಪಕ್ಕದಲ್ಲೆಲ್ಲ ಹುಡುಕಾಡಿದ್ದಾರೆ. ನಂತರ ನಿದ್ದೆಗೆ ಜಾರಿದ್ದ ಪತ್ನಿಯನ್ನು ಎಬ್ಬಿಸಿ ಈ ಬಗ್ಗೆ ವಿಚಾರಿಸಿದಾಗ, ಬೆಳಗ್ಗೆ 11 ಗಂಟೆಗೆ ಸ್ನೇಹಿತ ಜಾನ್ ಮನೆಗೆ ಬಂದಿದ್ದ. ನೀನು ತುಂಬಾ ದಪ್ಪ ಇದ್ದೀಯಾ, ತೆಳ್ಳಗಾಗಲು ನನ್ನ ಬಳಿ ಮಾತ್ರಯಿದೆ ಎಂದು ಹೇಳಿ ಯಾವುದೋ ಮಾತ್ರೆಯನ್ನು ಜ್ಯೂಸ್ಗೆ ಹಾಕಿ ಕೊಟ್ಟಿದ್ದ. ಇದಾದ ಸ್ವಲ್ಪ ಹೊತ್ತಿನ ನಂತರ ತಲೆ ಸುತ್ತು ಬಂದು ಮಲಗಿದ್ದೆ, ಆ ಸಂದರ್ಭದಲ್ಲಿ ಮಕ್ಕಳು ಮನೆಯಲ್ಲೆ ಆಟವಾಡುತ್ತಿದ್ದರು. ನಂತರ ಏನು ನಡೆದಿದೆ ಎಂಬುದು ನಮಗೆ ತಿಳಿಯಲಿಲ್ಲ ಎಂದು ಕುಮಾರ್ಗೆ ಪತ್ನಿ ವಿವರಿಸಿದ್ದಳು. ಇದನ್ನೆಲ್ಲಾ ಗಮನಿಸುತ್ತಿದ್ದ ಕುಮಾರ್ ಅವರ 4 ವರ್ಷದ ಮಗಳನ್ನು ಈ ಬಗ್ಗೆ ವಿಚಾರಿಸಿದಾಗ, ತಮ್ಮನನ್ನು ಜಾನ್ ಅಂಕಲ್ ಎತ್ತಿಕೊಂಡು ಹೋದರು ಎಂದು ತಿಳಿಸಿದ್ದಳು.
ನನ್ನದೇ ಮಗು: ದಂಪತಿ ಈ ಬಗ್ಗೆ ದೂರು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೇ25 ರಂದು ಟವರ್ ಲೊಕೇಶನ್ ಮೂಲಕ ಆರೋಪಿಯ ಮೊಬೈಲ್ ಕಾರ್ಯ ನಿರ್ವಹಿಸುತ್ತಿರುವ ಪ್ರದೇಶ ಪರಿಶೀಲಿಸಿದಾಗ ಆತ ರಾಮಮೂರ್ತಿನಗರದಲ್ಲಿರುವುದು ಪತ್ತೆ ಯಾಗಿತ್ತು. ಕೂಡಲೇ ಆತನ ಮನೆಗೆ ದಾಳಿ ನಡೆಸಿದ ಪೊಲೀಸರು ಮಗುವನ್ನು ರಕ್ಷಣೆ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ 2 ವರ್ಷಗಳಿಂದ ಕುಮಾರ್ ಪತ್ನಿ ಜತೆ ಸಂಬಂಧ ಹೊಂದಿದ್ದು, ಮಗು ನನ್ನದು. ಈ ಹಿನ್ನೆಲೆಯಲ್ಲಿ ಆಕೆಗೆ ಜ್ಯೂಸ್ನಲ್ಲಿ ಮತ್ತು ಬರುವ ಮಾತ್ರೆ ಹಾಕಿ ಕುಡಿಸಿದ್ದೆ. ಆಕೆ ಪ್ರಜ್ಞೆ ತಪ್ಪಿದ ನಂತರ ಮಗುವನ್ನು ಮನೆಗೆ ಕರೆದುಕೊಂಡು ಬಂದೆ. ಬೇರೆ ಉದ್ದೇಶದಿಂದ ಅಪಹರಿಸಲಿಲ್ಲ ಎಂದು ಆರೋಪಿ ಜಾನ್ ತಿಳಿಸಿದ್ದಾನೆ.
ಜೈಲು ಸೇರಿದ್ದ ಆರೋಪಿ
ಆರೋಪಿ ಕೆಲ ವರ್ಷಗಳ ಹಿಂದೆ ಇಂದಿರಾನಗರದಲ್ಲಿ ವ್ಯಕ್ತಿಯೊಬ್ಬರ ಜತೆ ಜಗಳ ಮಾಡಿಕೊಂಡು ಜೈಲು ಸೇರಿದ್ದ. ಒಂದು ವರ್ಷ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಕೆಲ ತಿಂಗಳ ಹಿಂದೆ ಜೈಲಿನಿಂದ ಹೊರ ಬಂದಿದ್ದ. ನಂತರ ಯಾವುದೇ ಕೆಲಸಕ್ಕೆ ಹೋಗದೇ ತಾಯಿ ಬಳಿ ಹಣ ಕೇಳಿ ದುಂದು ವೆಚ್ಚ ಮಾಡುತ್ತಿದ್ದ. ಕುಮಾರ್ ಪತ್ನಿಯ ಮೊಬೈಲ್ ನಂಬರ್ನ್ನು ಜಾನ್ಗೆ ಆತನ ಸ್ನೇಹಿತನೊಬ್ಬ ನೀಡಿದ್ದ. ಜಾನ್ ಕರೆ ಮಾಡಿ ಆಗಾಗ ಕುಮಾರ್ ಪತ್ನಿ ಬಳಿ ಮಾತನಾಡುತ್ತಿದ್ದ. ನಂತರ ಆಕೆಯ ಜತೆ ಸಲುಗೆ ಬೆಳೆಸಿಕೊಂಡಿದ್ದ. ನನ್ನದೇ ಮಗುವೆಂದು ಆರೋಪಿಯು ವಾದಿಸುತ್ತಿದ್ದಾನೆ. ಈ ಬಗ್ಗೆ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೃಪೆ:ವಿಜಯವಾಣಿ