ಬೆಂಗಳೂರು: ಮೇ-27:(www.justkannada.in) ಬಿರುಗಾಳಿ, ಮಳೆಗೆ ವಿದ್ಯುತ್ ತಂತಿ ತುಂಡಾಗಿ ಅಪಾಯ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇನ್ನು 2 ತಿಂಗಳಲ್ಲಿ ಎಲ್ಲ ಕೇಬಲ್ಗಳನ್ನು ನೆಲದಡಿಯಲ್ಲಿ ಹಾಕುವ ಯೋಜನೆ ಕೈಗೊಳ್ಳಲು ಚಿಂತನೆ ನದೆಸಲಾಗಿದೆ ಎಂದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುರಿದ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ಮರ,ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಸಂಚಾರಕ್ಕೂ ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಹಲವೆಡೆ ತಗ್ಗು ಪ್ರದೇಶಗಳಿಗೆ ನೀರುನುಗ್ಗಿ ಜನಜೀವ ಅಸ್ಥವ್ಯಸ್ಥಗೊಂಡಿದೆ. ಈ ಹಿನ್ನಲೆಯಲ್ಲಿ ರಾಜಧಾನಿಯ ವಿವಿಧ ಭಾಗಗಳಿಗೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಪರಿಶೀಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಮರ ಬಿದ್ದಾಗ ಹೆಚ್ಚಾಗಿ ಸಮಸ್ಯೆ ಆಗುವುದು ಕೇಬಲ್ಗಳು ಕಡಿತವಾಗುವುದು. ಇನ್ನು ಎರಡು ತಿಂಗಳಲ್ಲಿ ಎಲ್ಲ ಕೇಬಲ್ಗಳ ಲೈನ್ಗಳನ್ನು ನೆಲದಡಿಯಲ್ಲಿ ಎಳೆಯುವ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.
ಕಳೆದ ಎರಡು ದಿನದಿಂದ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, 500 ಕ್ಕೂ ಹೆಚ್ಚು ಮರಗಳು ಹಾನಿಯಾಗಿದೆ. 100 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದೆ. ರಾಜ್ಯದ ಕೆಲವೆಡೆ 120 ಮೀ.ಮೀ ಗೂ ಅಧಿಕ ಮಳೆಯಾಗಿದೆ. ಬಿರುಗಾಳಿ ಇದ್ದ ಕಾರಣ ಹೆಚ್ಚು ಮರ ನೆಲಕ್ಕುರುಳಿದೆ. ಮರಗಳ ತೆರವು, ವಿದ್ಯುತ್ ಲೈನ್ ಸರಿಪಡಿಸುವುದು ಸೇರಿ ಇತರೆ ಮಳೆ ಹಾನಿ ಸರಿಪಡಿಸಲು ಬಿಬಿಎಂಪಿ, ಬೆಸ್ಕಾಂ ಸೇರಿ ಇತರೆ ಇಲಾಖೆಗಳ 61 ತಂಡಗಳು ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಗಾಳಿ ಮಳೆಯಿಂದ ರಸ್ತೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಿ, ವಿದ್ಯುತ್ ಸಂಪರ್ಕ ಹಾಗೂ ಕೇಬಲ್ ಸಂಪರ್ಕಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪರಮೇಶ್ವರ್ ಅಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದ್ದಾರೆ.