ಬೆಂಗಳೂರು, ಮಾ,18,2020(www.justkannada.in): :ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ಪರಿಸರ ವಿಷಯಗಳಿಗೆ ಸಂಬಂಧಿಸಿದಂತೆ ಗಮನಾರ್ಹ ಸಾಧನೆ ಮಾಡಿರುವ ಪತ್ರಕರ್ತರಿಗೆ ನೀಡಲಾಗುವ ತಲಾ ಒಂದು ಲಕ್ಷ ರೂ ನಗದು ಪುರಸ್ಕಾರವನ್ನು ಒಳಗೊಂಡ 2017 ಮತ್ತು 2018 ನೇ ದಿನದರ್ಶೀ ವರ್ಷಗಳ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಹಾಗೂ ಪತ್ರಿಕಾ ಸಂಸ್ಥೆಗಳು ಮತ್ತು ಸಂಘಟನೆಗಳಿಂದ ನಾಮ ನಿರ್ದೇಶನಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಹ್ವಾನಿಸಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಮಾಧ್ಯಮ ಲೋಕದ ಅನುಭವೀ ಸದಸ್ಯರನ್ನು ಒಳಗೊಂಡ ತ್ರಿ-ಸದಸ್ಯ ಸಮಿತಿಯು ಈ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲಿದೆ.
ಪ್ರಶಸ್ತಿಗಳಿಗೆ ಅರ್ಜಿ ಅಥವಾ ನಾಮ ನಿರ್ದೇಶನ ಸಲ್ಲಿಸುವವರು ಮುದ್ರಣ ಮಾಧ್ಯಮ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ಕನಿಷ್ಠ ಹತ್ತು ವರ್ಷಗಳ ಸೇವೆ ಸಲ್ಲಿಸಿರಬೇಕು. ಅಲ್ಲದೆ, ಅಭಿವೃದ್ಧಿ ಪತ್ರಿಕೋದ್ಯಮ ಅಥವಾ ಪರಿಸರ ಪತ್ರಿಕೋದ್ಯಮ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರಬೇಕು.
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ : ರಾಜ್ಯದೆಲ್ಲೆಡೆ ಅಭಿವೃದ್ಧಿ-ಪರ ವಾತಾವರಣ ಮೂಡಿಸಲು ಅನುಕೂಲವಾಗುವಂತೆ ಅಭಿವೃದ್ಧಿಗೆ ಪೂರಕವಾದ ಲೇಖನಗಳನ್ನು ಬರೆದು ಅಥವಾ ಕಾರ್ಯಕ್ರಮಗಳನ್ನು ರೂಪಿಸಿ ಅಭಿವೃದ್ಧಿ ಪ್ರಕ್ರಿಯೆಗೆ ಪುಷ್ಠಿ ನೀಡಿ ಸಮಾಜಕ್ಕೆ ಕೊಡುಗೆ ಸಲ್ಲಿಸಿರುವ ಪತ್ರಕರ್ತರಿಗೆ ಒಂದು ಲಕ್ಷ ರೂ ನಗದು ಒಳಗೊಂಡ ಈ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಪರಿಸರ ಪತ್ರಿಕೋದ್ಯಮ ಪ್ರಶಸ್ತಿ : ಪರಿಸರ ಸಂರಕ್ಷಣೆ ಕುರಿತು ಪೂರಕ ಲೇಖನಗಳನ್ನು ಬರೆದು ಅಥವಾ ಕಾರ್ಯಕ್ರಮಗಳನ್ನು ರೂಪಿಸಿ ರಾಜ್ಯದಲ್ಲಿನ ಪರಿಸರದಲ್ಲಿ ಸಮತೋಲನ, ಪ್ರಕೃತಿ ಸೊಬಗು ಹಾಗೂ ನಿಸರ್ಗ ಸಿರಿ ಕಾಯ್ದುಕೊಳ್ಳಲು ಸಮಾಜಕ್ಕೆ ಕೊಡುಗೆ ಸಲ್ಲಿಸಿರುವ ಪತ್ರಕರ್ತರಿಗೆ ಒಂದು ಲಕ್ಷ ರೂ ನಗದು ಒಳಗೊಂಡ ಈ ವಾರ್ಷಿಕ ಪ್ರಶಸ್ತಿ ನೀಡಲಾಗುವುದು.
ಅರ್ಜಿದಾರರ ಅಥವಾ ನಾಮ ನಿರ್ದೇಶಿತರ ಮೊಬೈಲ್ ಸಂಖ್ಯೆ ಮತ್ತು ಸವಿವರ ಸಂಪರ್ಕ ವಿಳಾಸ ಒಳಗೊಂಡಂತೆ ಸ್ವ-ವಿವರಗಳು ಹಾಗೂ ಸಾಧನೆಗಳ ವಿವರಗಳನ್ನು ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಸೌಧ, ಸಂಖ್ಯೆ : 17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು – 560 001 ಇವರಿಗೆ ಅಥವಾ ಇ-ಮೇಲ್ ವಿಳಾಸ : diprkarnatakanews@gmail.com ಇಲ್ಲಿಗೆ ಮಾರ್ಚ್ 24 ರೊಳಗಾಗಿ ಸಲ್ಲಿಸಬಹುದು. ಅಲ್ಲದೆ, ಅರ್ಜಿಯೊಂದಿಗೆ ಅರ್ಜಿದಾರರ ಅಥವಾ ನಾಮ ನಿರ್ದೇಶಿತರ ವಿಶೇಷ ಸಾಧನೆಯನ್ನು ಸಮರ್ಥಿಸಲು ಪ್ರಕಟಿತ ವಿಶೇಷ ಲೇಖನ ಮಾಲೆಗಳ ಪತ್ರಿಕಾ ತುಣುಕುಗಳು, ಪ್ರಕಟಿತ ಪುಸ್ತಕಗಳ ಪ್ರತಿಗಳು ಅಥವಾ ಡಿ ವಿ ಡಿ ಅಥವಾ ಪೆನ್ ಡ್ರೈವ್‍ನಲ್ಲಿ ನಿರ್ಮಿಸಿರುವ ಕಾರ್ಯಕ್ರಮಗಳ ಸಂಚಿಕೆಗಳ ಪ್ರತಿಗಳು ಹಾಗೂ ಈಗಾಗಲೇ ಪಡೆದಿರುವ ಗೌರವಗಳ ದಾಖಲೆಗಳನ್ನೂ ಸಲ್ಲಿಸಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Key words: Applications – Development – Environmental –Journalism- Awards…