ಹುಬ್ಬಳ್ಳಿ, ಏಪ್ರಿಲ್ 16, 2020 (www.justkannada.in):
ಹುಬ್ಬಳ್ಳಿಯಲ್ಲಿ ಒಂದೇ ಕುಟುಂಬದಲ್ಲಿ ಐದು ಪ್ರಕರಣಗಳು ಪತ್ತೆಯಾಗಿರುವುದು ಹಾಗೂ ಜನಸಾಂದ್ರತೆ ಪ್ರಮಾಣ ಆಧರಿಸಿ ಧಾರವಾಡ ಜಿಲ್ಲೆಯನ್ನು ಹಾಟ್ ಸ್ಪಾಟ್ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಜಿಲ್ಲೆಯ ಜನತೆ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಮನೆಯಲ್ಲಿಯೇ ಇರುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಸಹಕರಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಮನವಿ ಮಾಡಿದ್ದಾರೆ.
ಕೆಸಿಡಿ ಆವರಣದ ಕೆನರಾ ಬ್ಯಾಂಕ್ ಎಲ್ಲಾ ಸಿಬ್ಬಂದಿ ಹೋಮ್ ಕ್ವಾರಂಟೈನ್: ಕೋವಿಡ್ ಪಾಸಿಟಿವ್ ಬಂದಿರುವ P 194 ವ್ಯಕ್ತಿಯು,
ಮಾ.19 ಪ್ರಯಾಣಿಸಿದ ಮುಂಬೈ- ಹುಬ್ಬಳ್ಳಿ ವಿ ಆರ್ ಎಲ್ ಬಸ್ ಮೂಲಕವೇ ಧಾರವಾಡ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಕೆನರಾ ಬ್ಯಾಂಕ್ ( ಹಿಂದಿನ ಸಿಂಡಿಕೇಟ್ ಬ್ಯಾಂಕ್) ನ ಸಿಬ್ಬಂದಿಯೊಬ್ಬರ ಪುತ್ರನೂ ಆಗಮಿಸಿದ್ದರು. ಅವರನ್ನು ಪಿ 194 ನ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ ಎಂದು ಪರಿಗಣಿಸಿ ಸರ್ಕಾರಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ಅವರ ತಂದೆಯು ಸೆಕೆಂಡರಿ ಸಂಪರ್ಕ ಹೊಂದಿದ ವ್ಯಕ್ತಿಯಾಗಿರುವುದರಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳನ್ನು ಅವರ ಮನೆಗಳಲ್ಲಿ ಪ್ರತ್ಯೇಕವಾಗಿ ಇಡಲಾಗಿದೆ.ಬ್ಯಾಂಕನ್ನು ಸಂಪೂರ್ಣವಾಗಿ ಸ್ಯಾನಿಟೈಸೇಷನ್ ಮಾಡಲಾಗಿದೆ.
ಸೋಮವಾರ ಏ.13 ಹಾಗೂ ಇಂದು ಏ.15 ರಂದು ಬ್ಯಾಂಕಿನ ವಹಿವಾಟು ನಡೆದಿಲ್ಲ. ಸಂಪರ್ಕಿತ ವ್ಯಕ್ತಿಗಳ ಪ್ರಯೋಗಾಲಯ ವರದಿ ಬಂದ ಕೂಡಲೇ ಬ್ಯಾಂಕ್ ಪುನರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.