ಅದು ಅಪ್ಪ- ಮಗನ ಕೃತಿ ಬಿಡುಗಡೆ ಸಮಾರಂಭ. ಅಪ್ಪ ಮಹಿಪಾಲ ರೆಡ್ಡಿ ಮುನ್ನೂರು ಹಾಗೂ ಮಗ ವಿಜಯಭಾಸ್ಕರ ರೆಡ್ಡಿ ಅವರ ಕೃತಿಗಳನ್ನು ಬಿಡುಗಡೆ ಮಾಡಲು ಕಲಬುರ್ಗಿಗೆ ಹೋಗಿದ್ದೆ.
ಕಾರ್ಯಕ್ರಮ ಮುಗಿದು ವಾಪಸ್ ಹೊರಟಾಗ ‘ನಮಸ್ಕಾರ ಸರ್’ ಎನ್ನುವ ದನಿ ಕೇಳಿತು. ತಿರುಗಿ ನೋಡಿದರೆ ರೇಣುಕಾ ಹೆಳವರ. ಪೊಲೀಸ್ ಸಮವಸ್ತ್ರದಲ್ಲಿದ್ದ ಕವಯತ್ರಿ. ಸುಮಾರು 15 ವರ್ಷಕ್ಕೂ ಹೆಚ್ಚು ಕಾಲದಿಂದ ಪೊಲೀಸ್ ಇಲಾಖೆಯಲ್ಲಿರುವ ರೇಣುಕಾ ಪೊಲೀಸ್ ಆಗಿ ಎಷ್ಟು ಪರಿಚಿತರೋ ಅಷ್ಟೇ ಕವಿಯಾಗಿಯೂ ಪಾಪ್ಯುಲರ್.
ಆಕೆಯ ಕೈ ಕುಲುಕುವಾಗ ನನಗೆ ಅದೇ ಕಲಬುರ್ಗಿಯಲ್ಲಿ ಅದೇ ರೀತಿ ಕೈ ಕುಲುಕಿದ ಮತ್ತೊಬ್ಬ ಪೊಲೀಸ್ ಅಧಿಕಾರಿ ನೆನಪಿಗೆ ಬಂದರು ಅವರು- ಡಿ ಸಿ ರಾಜಪ್ಪ.
ಪೊಲೀಸ್ ಗೂ ಪತ್ರಕರ್ತರಿಗೂ ಅಂತಹ ಒಳ್ಳೆಯ ನಂಟೇನೂ ಇರುವುದಿಲ್ಲ. ಎದುರಿಗೆ ನೋಡಿದಾಕ್ಷಣ ತೆಕ್ಕೆಗೆ ಬಿದ್ದರೂ ಬೆನ್ನ ಹಿಂದೆ ಹಾವು ಮುಂಗಸಿಯಾಟ ಶಾಶ್ವತವಾಗಿ ಜಾರಿಯಲ್ಲಿಟ್ಟಿರುತ್ತಾರೆ. ಅಂತಹದ್ದರ ನಡುವೆಯೂ ಒಂದು ರಾತ್ರಿ ಕಲಬುರ್ಗಿಯ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಡಿ ಸಿ ರಾಜಪ್ಪ ‘ಬನ್ನಿ ನಿಮಗೊಂದು ವಿಶೇಷ ಕೇಸ್ ಕಥೆ ಹೇಳ್ತೀನಿ’ ಎಂದು ಊರಾಚೆ ಇರುವ, ಕತ್ತೆತ್ತಿದರೆ ಆಕಾಶ ಕಾಣುತ್ತಿದ್ದ ಡಾಬಾದಲ್ಲಿ ಕೂರಿಸಿಕೊಂಡರು.
ನಾನು ಕುತೂಹಲದಿಂದ ಅವರ ಮುಖ ನೋಡಿದೆ. ‘ಏನ್ ಗೊತ್ತೇನ್ರೀ, ನಮ್ಮ ಪೊಲೀಸ್ ಒಬ್ಬ ಬಂದು ನನ್ನತ್ರ ಒಂದು ಕಂಪ್ಲೇಂಟ್ ಬರೆದುಕೊಟ್ಟಿದ್ದಾನೆ’ ಅಂದ್ರು.
‘ಅರೆ! ಪೊಲೀಸ್ ಕಂಪ್ಲೇಂಟ್ ಕೊಡ್ತಾನೆ ಅಂದ್ರೆ..’ ನನ್ನ ಪತ್ರಕರ್ತ ಕಿವಿ ಚುರುಕಾಯಿತು. ‘ಅದೇನು ಸಾರ್ ವಿಷಯ’ ಅಂದೆ. ‘ಥೋ.. ವಿಚಿತ್ರ ಕಣ್ರೀ ಒಂದು ಕಳ್ಳತನದ ಕಂಪ್ಲೇಂಟ್ ಅದು. ರಿಜಿಸ್ಟರ್ ಮಾಡಿಕೊಳ್ಳುವ ಹಾಗೂ ಇಲ್ಲಾ, ತನಿಖೆಗೆ ಕೈಗೆತ್ತಿಕೊಳ್ಳುವ ಹಾಗೂ ಇಲ್ಲ. ಹೋಗಲಿ ಅಂದ್ರೆ ಕಂಪ್ಲೇಂಟ್ ಸುಳ್ಳೂ ಅಲ್ಲ’ ಎನ್ನುತ್ತಾ ನನ್ನ ಮುಂದೆ ಒಗಟು ಹರಡತೊಡಗಿದ್ದರು.
ಆ ವೇಳೆಗಾಗಲೇ ಪೊಲೀಸ್ ಭಾಷೆಯನ್ನು ಬಿಡಿಸಿ ನನಗೆ ಸಾಕಷ್ಟು ಅನುಭವವಿತ್ತು. ಆದರೆ ಈ ಕೇಸ್ ಏನು ಎಂದು ತಲೆಕೆಳಗಾದರೂ ಅರ್ಥವಾಗಲಿಲ್ಲ.
ಆಗ ರಾಜಪ್ಪ ಅವರೇ ಬಾಯಿಬಿಟ್ಟರು. ‘ಆ ಪೊಲೀಸ್, ಆಗಸದಲ್ಲಿ ಚಂದ್ರನ ಕಳುವಾಗಿದೆ ಅಂತ ದೂರು ಕೊಟ್ಟಿದ್ದಾನೆ ಕಣ್ರೀ’ ಅಂದರು.
ನಾನು ‘ಹಾಂ’ ಎಂದು ಒಂದಿಷ್ಟು ಜಾಸ್ತಿಯೇ ಬಾಯಿ ಬಿಟ್ಟೆನೇನೋ.. ಅವರು ಗಂಭೀರವಾಗಿ ಸಮಸ್ಯೆ ಮುಂದಿಡುತ್ತಾ ಹೋದರು.
‘ಅವನು ಮಹಾಗಾಂವ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್. ಅವನಿಗೆ ನೈಟ್ ಡ್ಯೂಟಿ. ರಾತ್ರಿ ರೌಂಡ್ಸ್ ಮಾಡುವಾಗ ಆಕಾಶ ನೋಡಿದ್ದಾನೆ. ಚಂದ್ರ ಇಲ್ಲ. ಮತ್ತೆ 15 ದಿನ ಬಿಟ್ಟು ನೋಡಿದ್ದಾನೆ ಆಗಲೂ ಇಲ್ಲ. ಸರಿ ಬಂದವನೇ ನನ್ನೆದುರಿಗೆ ಕಂಪ್ಲೇಂಟ್ ಬರೆದುಕೊಟ್ಟಿದ್ದಾನೆ’ ಎಂದರು. ನಾನು ಇನ್ನೂ ಎನ್ ನರಸಿಂಹಯ್ಯ ಪತ್ತೇದಾರಿ ಕಾದಂಬರಿಯ 30ನೆಯ ಪುಟದಲ್ಲಿಯೇ ಇದ್ದವಂತೆ ತುಂಬು ಗೊಂದಲದಲ್ಲಿದ್ದೆ.
ಆಗ ಡಿ ಸಿ ರಾಜಪ್ಪ ಅವರೇ ನಗುತ್ತಾ ಬಾಯ್ಬಿಟ್ಟರು- ‘ಊರಲ್ಲಿ ಕಳ್ಳತನ ಆಗದಂತೆ ನೋಡಿಕೊಳ್ಳಲು ಅವನಿಗೆ ಬೀಟ್ ಹಾಕಿದ್ದೆ. ಹುಣ್ಣಿಮೆಯಲ್ಲಿ ತುಂಬು ಚಂದ್ರ ಇರುವಾಗ ಎಲ್ಲಾದ್ರೂ ಕಳ್ಳತನ ಆಗುತ್ತಾ.. ಹಾಗಾಗಿ ಅಮಾವಾಸ್ಯೆ ದಿನವೇ ಇವನಿಗೆ ಡ್ಯೂಟಿ. ಅಮಾವಾಸ್ಯೆ ದಿನ ಚಂದ್ರ ಇಲ್ಲ ಅಂತ ಕಂಪ್ಲೇಂಟ್ ಕೊಡಬೇಕಾದ್ರೆ ಅವನು ಪೊಲೀಸ್ ಯೂನಿಫಾರ್ಮ್ ನಲ್ಲಿರೋ ಕವೀನೇ ಆಗಿರ್ಬೇಕು’ ಅಂದ್ರು.
‘ಅದು ಸರಿ ಕಂಪ್ಲೇಂಟ್ ಮೇಲೆ ಏನು ಕ್ರಮ ಕೈಗೊಂಡ್ರಿ’ ಅಂತ ಕೇಳಿದೆ. ‘ಕವಿಗಳ ಕಂಪ್ಲೇಂಟ್ ಬಗೆಹರಿಸೋದು ತುಂಬಾ ಸುಲಭ. ಆತನನ್ನು ಎದುರಿಗೆ ಕೂರಿಸಿಕೊಂಡು, ಡಿಪಾರ್ಟ್ಮೆಂಟ್ ನ ಎಲ್ಲಾ ಪೊಲೀಸರನ್ನೂ ಕರೆಸಿ, ಅವನ ಚಂದ್ರನ ಕಳ್ಳತನವಾಗಿದೆ ಅನ್ನೋ ಕವಿತೆ ಓದಿಸಿ, ಟೀ ಕೊಟ್ಟು ಕಳಿಸಿದೆ’ ಎಂದು ಜೋರಾಗಿ ನಕ್ಕರು.
ಡಿ ಸಿ ರಾಜಪ್ಪ ಅಲ್ಲಿಗೆ ಸುಮ್ಮನಾಗಿಬಿಡಬಹುದಿತ್ತು. ಆದರೆ ಅವರೊಳಗೂ ಒಬ್ಬ ಕವಿ ಇದ್ದನಲ್ಲ ಅವನು ಸುಮ್ಮನಿರಲು ಬಿಡಲಿಲ್ಲ.
ಅತ್ಯಾಚಾರಕ್ಕೆ ಒಳಗಾದ 12 ವರ್ಷದ ಬಾಲಕಿ ಪೊಲೀಸ್ ಸ್ಟೇಷನ್ ನಲ್ಲಿಯೇ ಮುಗುವಿಗೆ ಜನ್ಮ ನೀಡಿದ್ದು, ಆಟದ ಗೊಂಬೆ ಇರಬೇಕಾದ ಜಾಗದಲ್ಲಿ ನಿಜ ಕೂಸೇ ಇರುವುದು, ಸಾಗರದ ಸಮೀಪ ಕೋಮು ಗಲಭೆಯಲ್ಲಿ ಭಯ ಬಿದ್ದು ಓಡುತ್ತಿದ್ದ ತಾಯಿಯಕೈಯಿಂದ ಗದ್ದೆಯಲ್ಲಿ ಮಗು ಜಾರಿ ಹೋಗಿದ್ದು, ಹಿಂದೆ ಬರುತ್ತಿದ್ದ ತಂದೆ ಗೊತ್ತೇ ಆಗದೆ ಮಗುವನ್ನು ತುಳಿದು ಓಡಿದ್ದೂ.. ಹೀಗೆ ಎಷ್ಟೋ ಘಟನೆಗಳನ್ನು ಕವಿತೆಯಾಗಿಸುತ್ತಿದ್ದರು.
ಇದೆಲ್ಲಾ ಕೇಳಿ ನಾನು ಕಲಬುರ್ಗಿಯ ‘ಹತ್ತೂ ಸಮಸ್ತರನ್ನು’ ಒಟ್ಟುಗೂಡಿಸಿ ನನ್ನ ಮನೆಯಲ್ಲಿ ಚಹಾ, ಚುರಮುರಿ ಜೊತೆ ರಾಜಪ್ಪನವರ ಕವಿತೆ ಓದಿಸಿದೆ. ಪೊಲೀಸ್ ಸಮವಸ್ತ್ರ ಬದಿಗಿಟ್ಟು, ಲಾಠಿ ಇಲ್ಲದೆ ಬಂದಿದ್ದ ಅವರ ಸಂಕೋಚವನ್ನು ನೀವು ನೋಡಬೇಕಿತ್ತು. ರಾಜಪ್ಪನವರು ‘ಸಮವಸ್ತ್ರದೊಳಗೊಂದು ಸುತ್ತು’ ಬಂದುಬಿಟ್ಟರು.
ಅಲ್ಲಿಂದ ಅವರು ಸುಮ್ಮನೆ ಕೂರಲೇ ಇಲ್ಲ. ಗಲಭೆಗಳಲ್ಲಿ ಎಗ್ಗಿಲ್ಲದೆ ಲಾಠಿ ಬೀಸುವವರ, ಕೋಮು ಗಲಭೆಗಳಲ್ಲಿ ತಾವೂ ಏಟು ತಿಂದು ರಕ್ತ ಸುರಿಸುವವರ, ಪ್ರತೀ ದಿನ ಕೊಲೆ ಸುಲಿಗೆ ನೇಣು ಅತ್ಯಾಚಾರ ಕಾಣುವವರ ಒಳಗೂ ಆಡುವ ಕವಿತೆಯನ್ನು ಕಂಡರು.
ಅಲ್ಲಿಂದ ಶುರುವಾಯಿತು ಅವರ ‘ಸಮವಸ್ತ್ರದೊಳಗೊಂದು ಸುತ್ತು’ ಅಭಿಯಾನ. ರಾಜ್ಯದ ಎಲ್ಲೆಡೆ ಕವಿತೆ ಬರೆವ ಹುಚ್ಚಿದ್ದವರನ್ನೆಲ್ಲ ಹುಡುಕತೊಡಗಿದರು. ಇಡೀ ಇಲಾಖೆ ಮುಸಿ ಮುಸಿ ನಕ್ಕಿತು. ಆದರೆ ರಾಜಪ್ಪ ಸುಮ್ಮನೆ ಕೂರಲಿಲ್ಲ. ಅದರ ಫಲವೇ.. ಟ್ರಾಫಿಕ್, ರೈಲ್ವೆ, ವೈರ್ ಲೆಸ್, ಫಿಂಗರ್ ಪ್ರಿಂಟ್, ಕೆ ಎಸ್ ಆರ್ ಪಿ ಹೀಗೆ ಎಲ್ಲಾ ವಿಭಾಗದಿಂದಲೂ ನೂರಕ್ಕೂ ಹೆಚ್ಚು ಕವಿಗಳು ಕಂಡರು. ಪೊಲೀಸ್ ಕಾನ್ಸ್ಟೇಬಲ್ ಇಂದ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಯವರೆಗೆ ಕವಿಗಳು ಸಿಕ್ಕರು.
ಫಲ, ರಾಜ್ಯಮಟ್ಟದ ಪೊಲೀಸ್ ಕವಿ ಸಮ್ಮೇಳನ. ಶಿವಮೊಗ್ಗ, ಬಳ್ಳಾರಿ, ಬೆಳಗಾವಿ ಹೀಗೆ ಮೂರು ಸುತ್ತು ರಾಜ್ಯ ಮಟ್ಟದ ಪೊಲೀಸ್ ಕವಿಗೋಷ್ಟಿಗಳಾಗಿವೆ. ಇದರ ಸಂಕಲನಗಳೂ ಬಂದಿವೆ.
ಹೌದಲ್ಲಾ, ಪಿ ಎಸ್ ರಾಮಾನುಜಂ, ಅಜಯ್ ಕುಮಾರ್ ಸಿಂಗ್, ವಿಜಯ ಸಾಸನೂರು, ಎಸ್ ಕೃಷ್ಣಮೂರ್ತಿ, ರವಿಕಾಂತೇಗೌಡ.. ಹೀಗೆ ಅಧಿಕಾರಿಗಳಲ್ಲೇ ಎಷ್ಟೊಂದು ಬರಹಗಾರರಿದ್ದರು ಎಂದು ನಾನು ಲೆಕ್ಕ ಹಾಕುತ್ತಾ ಕೂತೆ.
ಆಗಲೇ ರಾಜಪ್ಪ, ‘ಮೋಹನ್, ಕನ್ನಡದ ಮೊಟ್ಟಮೊದಲ ಸಾಮಾಜಿಕ ಕಾದಂಬರಿ ಯಾವುದು ಗೊತ್ತಾ?’ ಎಂದರು.
‘ಸಾರ್, ಅದು ಗುಲ್ವಾಡಿ ವೆಂಕಟರಾಯರ ಇಂದಿರಾಬಾಯಿ ಅಲ್ವೇ’ ಎಂದೆ. ನೆನಪಿರಲಿ ಮೋಹನ್ ಅದನ್ನು ಬರೆದ ಗುಲ್ವಾಡಿ ವೆಂಕಟರಾಯರು ಒಬ್ಬ ಪೊಲೀಸ್. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಸಾಮಾಜಿಕ ಆಯಾಮ ದೊರೆತದ್ದೇ ಪೊಲೀಸರಿಂದ..’ ಎಂದರು.
ನಾನು ಬಿಟ್ಟ ಕಣ್ಣು ಬಿಟ್ಟೇ ಇದ್ದೇನೆ..