ನವದೆಹಲಿ, ಮೇ 05, 2020 (www.justkannada.in): ಬ್ಯಾಂಕ್ ಸಾಲಗಳ ಮರುಪಾವತಿಗೆ ಮತ್ತೆ 3 ತಿಂಗಳು ವಿನಾಯಿತಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸಿದೆ.
ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಹೀಗಾಗಿ ಸಾಮಾನ್ಯ ಜನ ಮತ್ತು ಉದ್ಯಮಗಳ ಹಿತರಕ್ಷಣೆಯ ದೃಷ್ಟಿಯಿಂದ ಬ್ಯಾಂಕ್ ಸಾಲಗಳ ಮೇಲಿನ ಮರುಪಾವತಿಯನ್ನು ಆರ್‌ಬಿಐ ಮತ್ತೆ ಮೂರು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾಪವನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ.
ಈ ಹಿಂದೆ ಸಾಲಗಳ ಮರುಪಾವತಿಯ ಕಾಲವನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಭಾರತೀಯ ಬ್ಯಾಂಕುಗಳ ಸಂಘ ಸೇರಿದಂತೆ ವಿವಿಧ ಭಾಗಗಳಿಂದ ಸಲಹೆಗಳು ಬಂದಿದ್ದವು. ಪ್ರಸ್ತುತ ಕೇಂದ್ರ ಸರ್ಕಾರ ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ ನೀಡಿದೆಯಾದರೂ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಪುನಾರಂಭಗೊಂಡಿಲ್ಲ.
ಈ ಕಾರಣಕ್ಕೆ ಆರ್ ಬಿಐ ಕೂಡ ಬ್ಯಾಂಕ್ ಸಾಲಗಳ ಮರುಪಾವತಿಗೆ ಮತ್ತೆ 3 ತಿಂಗಳು ವಿನಾಯಿತಿ ನೀಡುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ.