ಮೈಸೂರು, ಮೇ 12, 2020 (www.justkannada.in): ಬಿಜೆಪಿ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಬಿಡುಗಡೆ ಮಾಡಿರುವ 1601 ಕೋಟಿ ರೂ ಪ್ಯಾಕೇಜ್ ಪೈಕಿ ಸುಮಾರು 900 ಕೋಟಿ ಸೆಸ್ ಕಾರ್ಮಿಕ ನಿಧಿಯಿಂದ ನೀಡಲಾಗಿದೆ. ಆ ಹಣವನ್ನು ಕಾರ್ಮಿಕ ಕಲ್ಯಾಣ ನಿಧಿಯಿಂದಲೇ 5,000 ರೂ ನಂತೆ ಬಿಡುಗಡೆ ಮಾಡಲಾಗುತ್ತದೆ. ವಿಶೇಷ ಪ್ಯಾಕೇಜ್ ಎಂಬುದು ಬಿಜೆಪಿ ಪ್ರಚಾರ ತಂತ್ರದ ಒಂದು ಭಾಗವಷ್ಟೆ. ಮಣಿವಣ್ಣನ್ ಅವರನ್ನು ವರ್ಗಾವಣೆ ಮಾಡಿರೋದು ನಾಚಿಕೆಗೇಡಿನ ಸಂಗತಿ ಎಂದು ದೂರಿದ್ದಾರೆ.
ಕೋವಿಡ್ 19 ವಿಚಾರವಾಗಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ರಾಜಕೀಯ ಮಾಡಿಲ್ಲ. ಮೈಸೂರಿನಲ್ಲಿ ಸದ್ಯ ಕಸನಿರ್ವಹಣೆ ಆಗುತ್ತಿದೆ. ಸಮಸ್ಯೆ ಬಗೆಹರಿಸುವ ಕೆಲಸ ರಾಮದಾಸ್ ಆಗಲಿ, ಪ್ರತಾಪ್ ಸಿಂಹ ಆಗಲಿ ಮಾಡಿಲ್ಲ. ಇನ್ನು ಪ್ರತಾಪ್ ಸಿಂಹ ಹೇಳುವ ಸಿಗ್ಮಾ ಕಂಪನಿ ಯಾರದ್ದು? ನನಗಿರುವ ಮಾಹಿತಿ ಪ್ರಕಾರ ಸಿಗ್ಮಾ ಕಂಪನಿ RSS ವ್ಯಕ್ತಿಯ ಒಡೆತನದ್ದು. ದಯವಿಟ್ಟು ಪ್ರತಾಪ್ ಸಿಂಹ ಅವರೇ ಸಿಗ್ಮಾ ಕಂಪನಿ ಯಾರದ್ದು ಎಂದು ಬಹಿರಂಗಪಡಿಸಿ ಎಂದು ಆಗ್ರಹಿಸಿದ್ದಾರೆ.
ನೀವುಗಳು ಸುಮ್ಮನೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ. ಇನ್ನು ಮಾಜಿ ಸಚಿವ ವಿಶ್ವನಾಥ್ ತೆವಲು ಬಂದಾಗ ಮಾತ್ರವೇ ಹುಣಸೂರನ್ನು ಜಿಲ್ಲೆ ಮಾಡುವ ಮಾತನಾಡುತ್ತಾರೆ. ಕಂದಾಯ ಮಂತ್ರಿಗಳು ಹುಣಸೂರನ್ನು ಜಿಲ್ಲೆಯನ್ನಾಗಿ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳುತ್ತಾರೆ. ಆದರೆ ಕಂದಾಯ ಮಂತ್ರಿಗಳು ಸದ್ಯಕ್ಕೆ ಆ ರೀತಿಯ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹುಣಸೂರಿನಲ್ಲಿ ಇದುವರೆಗೂ ಅವರು ದಿನಸಿ ಕಿಟ್ ವಿತರಿಸಿಲ್ಲ. ನಮ್ಮ ಪಕ್ಷದ ಶಾಸಕ ಮಂಜುನಾಥ್ ಆ ಕೆಲಸವನ್ನು ಮಾಡುತ್ತಿದ್ದಾರೆ. ಹಳ್ಳಿ ಹಳ್ಳಿಗೂ ತೆರಳಿ ದಿನಸಿ ಕಿಟಕ ವಿತರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.